ಕಾಲನ ತೆರೆಯ ಮರೆಯಾದ ಕಿರು ತೆರೆ ಚಲನಚಿತ್ರ ನಾಯಕ ಕೆ. ಗಣೇಶ್ ಕುಮಾರ
ಲಂಬಾಣಿ ಸಮಾಜದ ಸಂಸ್ಕೃತಿ, ರೂಢಿ - ಪರಂಪರೆಗಳನ್ನು ತಮ್ಮ ಹಾಡುಗಳಲ್ಲಿ ಪೋಣಿಸಿ ಶೋತೃಗಳಿಗೆ ದಶಕಾನುದಶಕಗಳಿಂದ ರಸಿಕರ ಮನ ತಣಿಸಿದ ಬಂಜಾರ ಸುಪರಸ್ಟಾರ್ ಕಲಾವಿದ, ಗಾಯಕ ಕೆ. ಗಣೇಶ ಕುಮಾರ ತೆರೆಯ ಮರೆಯಾದರೆಂಬ ಸುದ್ದಿ ಸಮಸ್ತ ಲಂಬಾಣಿ ಸಮುದಾಯಕ್ಕೆ ಭರಿಸಲಾಗದ ದು:ಖವಾಗಿದೆ.ಮೊದಲಿನ ಕಾಲದಲ್ಲಿ ಜನಪದ ಹಾಡುಗಳೇ ಲಂಬಾಣಿ ಸಮುದಾಯದ ಹೋಳಿ ಹಬ್ಬ, ದೀಪಾವಳಿ, ಮದುವೆ ಸಮಾರಂಭಗಳಲ್ಲಿ ಮನೋರಂಜನೆಯ ಮಹತ್ವದ ಸಾಧನಗಳಾಗಿದ್ದವು. ಇತರ ಹೆಚ್ಚಿನ ಸಾಧನೆಗಳೇನು ಇರಲಿಲ್ಲ. ತಾಂಡಾ ಜನರು ಪಾರಂಪಾರಿಕ ಪದ್ಧತಿಯಿಂದ ಆಡುವ ಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಾ ಕುಣಿಯುತ್ತಾ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಟೇಪ್ ರೆಕಾರ್ಡರ್ ಬಂದ ಮೇಲೆ ಹಿಂದಿ, ಮರಾಠಿ, ಕನ್ನಡ ಗೀತೆಗಳು ಮಾತ್ರ ಕೇಳಿಸಲಾಗುತ್ತಿತ್ತು. ಲಂಬಾಣಿ ಹಾಡುಗಳು ಅಷ್ಟೇನೂ ಬೆಳಕಿಗೆ ಬಂದಿರಲಿಲ್ಲ.
1990-95 ರ ಸಮಯದಲ್ಲಿ ರಮೇಶ ರಾಠೋಡ ಎಂಬ ಕಲಾವಿದರು ಬಂಜಾರಾ ಕ್ಯಾಸೆಟ್ ಬಿಡುಗಡೆ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಪದಾರ್ಪಣೆ ಮಾಡಿದರು. ಅನಂತರ ಡಾ. ಗೀತಕುಮಾರ ಪವಾರ ಇವರು ' ಗೀತಾಂಜಲಿ ' ಎಂಬ ಕ್ಯಾಸೆಟ್ ಮೂಲಕ ಸುಮಧುರ ಲಂಬಾಣಿ ಜಾನಪದ ಗೀತೆಗಳ ಧ್ವನಿಸುರುಳಿ ಬಿಡುಗಡೆ ಮಾಡಿದರು. ಅದರಲ್ಲಿ ಗೀತೆಗಳು ಜನಪ್ರಿಯವಾಗಿದ್ದು, ಇಂದಿಗೂ ಗೀತಾಂಜಲಿ ಗೀತೆಗಳು ಜನ ಆನಂದದಿಂದ ಆಲಿಸುತ್ತಾರೆ.
ಆ ನಂತರ ಕೆ. ಗಣೇಶ್ ಕುಮಾರ ಇವರು ಒಂದಕ್ಕಿಂತ ಒಂದು ಲಂಬಾಣಿ ಹಾಡುಗಳ ಕ್ಯಾಸೆಟ್ ಗಳನ್ನು ತೆಗೆದು ಲಂಬಾಣಿ ರಸಿಕ ಬಾಂಧವರಿಗೆ ಮನೋರಂಜನೆಯೊಂದಿಗೆ ಸಮಾಜ ಪ್ರಭೋಧನೆಯ ಮಾಧ್ಯಮವನ್ನಾಗಿ ಈ ಕ್ಷೇತ್ರವನ್ನು ಬಳಸಿದ್ದರು. ಕ್ಯಾಸೆಟ್ ಜೊತೆಗೆ ಸಿ. ಡಿ. ಗಳ ಮೂಲಕ ಇಂದಿಗೂ ಕೆ. ಗಣೇಶ್ ಕುಮಾರ ಅವರ ಹಾಡುಗಳು ಜನರ ಮನದಲ್ಲಿ ಮನೆ ಮಾಡಿವೆ. ಯಾವುದೇ ಕಾರ್ಯಕ್ರಮಗಳಲ್ಲಿ ಈ ಹಾಡುಗಳು ಕೇಳಿಸಿಕೊಳ್ಳುತ್ತಿವೆ. ಲಂಬಾಣಿ ಭಾಷೆಯೊಂದಿಗೆ ಇವರು ಗೊಂಡಿ ಭಾಷೆಯಲ್ಲೂ ಕ್ಯಾಸೆಟ್, ಸಿ. ಡಿ. ತೆಗೆದಿದ್ದಾರೆ.
ಕೆ. ಗಣೇಶ್ ಕುಮಾರ್ ಕುನಾಲ್ ಮ್ಯೂಸಿಕ್ ಕಂಪನಿ ಜೊತೆ ಕರಾರು ಮಾಡಿಕೊಂಡು ಹತ್ತು ಹಲವಾರು ಕ್ಯಾಸೆಟ್, ಸಿ.ಡಿ.ಗಳನ್ನು ತೆಗೆದಿದ್ದರು. ಅವರ ಹಿಂದಿ ಹಾಡುಗಳ ಲಂಬಾಣಿ ಡಬ್ಬಿಂಗ್ ಸಾಂಗ್ಸ್ ನಕರಾಳಿ ಪಾಮಣಿ, ಸಜನಿ, ರುಢಿ ಮಾರೆ ಆಜೋ, ಬಂಜಾರಾ ಕವ್ವಾಲಿ ಮುಕಾಬಲಾ ಜನಪ್ರೀಯ ಗೀತೆಗಳಾಗಿವೆ. ಅದರೊಂದಿಗೆ ಬಂಜಾರಾ ನಾಟಕ ಡಾಕು ಗೋಬರಾ ಸಿಂಗ್, ಮಿಮಿಕ್ರಿ ದ ಗ್ರೇಟ್ ಬಂಜಾರಾ, ಬಂಜಾರಾ ನಟಸಮ್ರಾಟ, ಬಂಜಾರಾ ಆರ್ಕೆಸ್ಟ್ರಾ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಲಂಬಾಣಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅಪಾರ ಕಾರ್ಯ ಮಾಡಿರುತ್ತಾರೆ. ಆಲ್ ಇಂಡಿಯಾ ಬಂಜಾರಾ ಕಲಾವಂತ ಸಂಘಟನೆ ಮೂಲಕ ಹಲವಾರು ಲಂಬಾಣಿ ಯುವಕ - ಯುವತಿಯರಿಗೆ ಕಲಾವಂತರಾಗುವ ವೇದಿಕೆ ಉಪಲಬ್ಧ ಮಾಡಿರುತ್ತಾರೆ. ವಸಂತ ವಿಚಾರಧಾರೆ ಮಂಚ ಆಗಷ್ಟ್ 14ರಲ್ಲಿ ಹಮ್ಮಿಕೊಂಡ ಪದ್ಮಶ್ರೀ ರಾಮಸಿಂಹ ಜಿ ಭನಾವತ ಇವರ ಜಯಂತಿ, ಮಹಾನಾಯಕ ವಸಂತರಾವ್ ನಾಯಿಕ ಇವರ ಸ್ಮೃತಿದಿನ ಹಾಗೂ ಸುಧಾಕರರಾವ ನಾಯಿಕಸಾಹೇಬ ಇವರ ಜಯಂತಿಯ ನಿಮಿತ್ತವಾಗಿ ಸಂಯುಕ್ತ ಅಭಿವಾದನ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಜನ ಜಾಗೃತಿಯ ಕಾರ್ಯಕ್ರಮ ನಡೆಸಿಕೊಟ್ಟರು.
ಸೂಪರ್ಸ್ಟಾರ್ ಕೆ. ಗಣೇಶ್ ಕುಮಾರ ಇವರ ಜನ್ಮ ಜಾಮನಾಯಿಕ ತಾಂಡಾ ತಾ. ಪುಸದದ ಫಕೀರಾ ಕಾಳೆ ಮತ್ತು ತುಳಸಿಬಾಯಿ ಕಾಳೆ ಇವರ ಉದಾರದಲ್ಲಾಯಿತು. ಫಕೀರಾ ಕಾಳೆ ಇವರಿಗೆ ಇಬ್ಬರು ಹುಡುಗಿಯರು, ಇಬ್ಬರು ಹುಡುಗರು ಹೀಗೆ ನಾಲ್ವರು ಮಕ್ಕಳು. ಹಿರಿಯ ಮಗಳು ಕೌಶಲ್ಯಬಾಯಿ, ಅನಂತರ ಪ್ರಲ್ಹಾದ, ಪೂರ್ಣಾಬಾಯಿ ಹಾಗೂ ಎಲ್ಲಕ್ಕಿಂತ ಚಿಕ್ಕವರೇ ಗಣೇಶ್ ಫಕೀರಾ ಕಾಳೆ ಉರ್ಫ್ ನಮ್ಮ ಕೆ. ಗಣೇಶ್ ಕುಮಾರ. ಕಾಳೆ ಕುಟುಂಬ ನಂತರ ಉದರನಿರ್ವಹಣೆಗಾಗಿ ಸ್ಥಳಾಂತರಗೊಂಡು ಮಾಹುರ ರೋಡ್ ಹತ್ತಿರ ಮುಂಗಸಿ ನಗರ ತಾಂಡೆಯಲ್ಲಿ ನೆಲೆಸಿದ್ದರು. ಈಗ ಗಣೇಶ್ ಕುಮಾರ ಇವರಿಗೆ ಅರ್ಜುನ್ ಮತ್ತು ಕೃಷ್ಣ ಇಬ್ಬರು ಹುಡುಗರು ಹಾಗೂ ಒಬ್ಬ ಹುಡುಗಿ ಇದ್ದಾಳೆ.
ಬಾಲಕ ಗಣೇಶನಿಗೆ ತಂದೆ ಶಾಲೆಗೆ ಸೇರಿಸಿದರೂ ಆತನ ಮನಸ್ಸು ಶಾಲೆಯಲ್ಲಿ ಸ್ಥಿರವಾಗಿ ಉಳಿಯಲಿಲ್ಲ. ಯಾರಾದರೂ ಹಲಗೆ (ದಪಡಾ) ಬಾರಿಸುತ್ತಿದ್ದರೆ, ಭಜನೆ ಮಾಡುತ್ತಿದ್ದರೆ ಅಲ್ಲಿಗೆ ಹೋಗಿ ತಾನೂ ಯಾವುದಾದರೂ ವಾದ್ಯ ತೆಗೆದುಕೊಂಡು ಬಾರಿಸಲು ತಯಾರಾಗುತ್ತಿದ್ದನು. ಭಜನೆ ಮನಸ್ಸಿಟ್ಟು ಆಲಿಸಿ ಮನ ಬಂದರೆ ತಬಲಾ ತಾಳಕ್ಕೆ ಹೆಜ್ಜೆ ಹಾಕಿ ಕುಣಿಯಲು ಅಣಿಯಾಗುತ್ತಿದ್ದನು. ಮಣ್ಣಿನಿಂದ ಟೇಪ್ ರೆಕಾರ್ಡರ್, ಲೌಢ್ ಸ್ಪೀಕರ್ ತಯಾರಿಸಿ ಸ್ವತ ತಾನೇ ಹಾಡುತ್ತಿದ್ದನು. ಊರಿನಲ್ಲಿ ಯಾವುದೇ ಕಲಾಪಥಕ ಬಂದರೆ ಬಲು ಲಕ್ಷ್ಯಪೂರ್ವಕ ನೋಡುತ್ತಾ ಕೊನೆಯವರೆಗೂ ಅಲ್ಲಿಯೇ ನಿಂತುಕೊಳ್ಳುತ್ತಿದ್ದನು. ಆನಂತರ ಆ ಕಲಾಪಥಕದಲ್ಲಿಯ ಕಲಾವಂತರಂತೆ ತಾನು ಅಭಿನಯ ಮಾಡಿ ಮನೆಯಲ್ಲಿ ತೋರಿಸುತ್ತಿದ್ದನು. ತಾರುಣ್ಯಕ್ಕೆ ಪದಾರ್ಪಣೆ ಮಾಡಿದಂತೆ ಕೆ. ಗಣೇಶ್ ಕುಮಾರ ಎಂಬ ಹೆಸರಿನಿಂದ ಕಲಾಪಥಕ ತಂಡ ಸ್ಥಾಪನೆ ಮಾಡಿದನು ಮತ್ತು ಅದರ ಮೂಲಕ ಲಂಬಾಣಿ ಹಾಡುಗಳು, ನಾಟಕ, ಆರ್ಕೆಸ್ಟ್ರಾ, ವಿವಿಧ ಹಿಂದಿ, ಮರಾಠಿ ಕಲಾಕಾರರ ಅಭಿನಯ ಮಾಡುತ್ತಾ ಹೋಳಿ ಹಾಡುಗಳು, ದೀಪಾವಳಿ ಮೇರಾ, ಟೀಜ ಉತ್ಸವದ ಹಾಡುಗಳು, ಮದುವೆ ಸಮಾರಂಭದಲ್ಲಿ ಹಾಡಲಾಗುವ ಅನೇಕ ಹಾಡುಗಳ ಧ್ವನಿಸುರುಳಿಗಳು ಮುಂಬಯಿಯ ಕೃನಾಳ ಕಂಪನಿಯ ಸಹಾಯದಿಂದ ಬಿಡುಗಡೆಮಾಡಿ ಲಂಬಾಣಿ ರಸಿಕರ ಮನ, ಹೃದಯ ಗೆದ್ದುಕೊಂಡು ಪ್ರಸಿದ್ಧ ಕಲಾವಂತನಾದರು. ಮನೆ ಮಗನಾದರು. ಅನೇಕ ತಾಂಡಾಗಳಲ್ಲಿ ವಿವಿಧ ಕಾರ್ಯಕ್ರಮಗಳಿಗೆ ನಿಮಂತ್ರಿತರಾಗಿ ಜನರ ಮನೋರಂಜನೆಯೊಂದಿಗೆ ಸಮಾಜ ಪ್ರಭೋದನೆ ಮಾಡುತ್ತಾ ಲೋಕಸೇವೆ ಮಾಡಿದರು. ಇಂಥಹ ಅಷ್ಟಪೈಲು ಕಲಾಕಾರ ಕಳೆದ ಅಕ್ಟೋಬರ್ 17 ರಂದು ಅನಾರೋಗ್ಯದ ಕಾರಣದಿಂದ ಅಸುನೀಗಿದರು. ಕಿರುತೆರೆ ಕಲಾವಿದ ಈ ತೆರೆ ಬಿಟ್ಟು ಕಾಲನ ತೆರೆಯ ಮರೆಯಾದರು. ನಿನ್ನೆ ಅವರ ಸಾವಿನ ಹದಿಮೂರನೆಯ ದಿನದ ಅಂಗವಾಗಿ ಮನದುಂಬಿ ಅವರ ಬಗೆಗಿನ ಅಲ್ಪ ಪ್ರಮಾಣದ ಮಾಹಿತಿಯನ್ನು ಈ ಪೋಸ್ಟ್ ಮೂಲಕ ನಾಡಿನ ಬಂಜಾರಾ ಬಾಂಧವರಿಗೆ ತಿಳಿಸುತ್ತಾ ಕೆ. ಗಣೇಶ್ ಕುಮಾರ್ ಅವರ ಪವಿತ್ರ ಸ್ಮೃತಿಗೆ ನಮ್ರತೆ ಅಭಿವಾದನೆ ಸಲ್ಲಿಸುತ್ತೇನೆ.
- ದಿನೇಶ ಚವ್ಹಾಣ
0 ಕಾಮೆಂಟ್‌ಗಳು
ಧನ್ಯವಾದಗಳು