ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

FATHER - MOTHER ARE LIVING GOD = ತಂದೆ-ತಾಯಿ ಇಬ್ಬರೇ ಕಣ್ಣಿಗೆ ಕಾಣುವ ದೇವರು

 

ತಂದೆ-ತಾಯಿ ಇಬ್ಬರೇ ಕಣ್ಣಿಗೆ ಕಾಣುವ ದೇವರು


 


                            ಈ ಭಾಷಣ ಸ್ಪರ್ಧೆಯ ಸನ್ಯೋಜಕರೆ, ಸನ್ಮಾನನಿಯ ವೇದಿಕೆಗೆ ಶರಣು ಶರಣಾರ್ಥಿಗಳು. ನನ್ನ ಹೆಸರು ................................ ನನ್ನ ಭಾಷಣದ ವಿಷಯ- ತಂದೆ ತಾಯಿ. ಸ್ನೇಹಿತರೇ, ಮಾತೃದೇವೋ ಭವಪಿತೃದೇವೋ ಭವ|’, ಎಂದರೆ ‘ತಾಯಿತಂದೆಯರು ದೇವರಿಗೆ ಸಮಾನವಾಗಿದ್ದಾರೆ.’ ಇದು ನಮ್ಮ ಮಹಾನ ಹಿಂದೂ ಸಂಸ್ಕೃತಿಯ ಶಿಕ್ಷಣವಾಗಿದೆ. ‘ತಂದೆ-ತಾಯಿ ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚರ್ಯವೇ ಆಗಿದೆ’, ಎಂದು 

ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆತಂದೆತಾಯಿಯರ ಮಹತ್ವವನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಿದೆ ಪ್ರತಿ ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯರ ಪಾತ್ರ ಅತ್ಯಮೂಲ್ಯವಾಗಿದೆ. ಬರೆಯ ಜನ್ಮದಾತರು ಮಾತ್ರವಲ್ಲ, ತಂದೆ ತಾಯಿಯರು ಮಗುವಿಗೆ ಉತ್ತಮ ಗುಣಗಳನ್ನು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಶ್ರಮಿಸುತ್ತಾರೆ. ಈ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಮಕ್ಕಳ ಏಳ್ಗೆಗಾಗಿ ತಮ್ಮ ಜೀವಮಾನದ ಗಳಿಕೆಯನ್ನೇ ಪಣವಾಗಿಟ್ಟು ತಮ್ಮ ಮಕ್ಕಳ ಸುಖದಲ್ಲಿಯೇ ಸುಖ ಕಾಣುವ ತಂದೆ ತಾಯಿಯರ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಆದರೆ ಕೆಲವು ಕೃತಘ್ನ ಮಕ್ಕಳು ತಮ್ಮ ರೆಕ್ಕೆ ಬಲಿತ ಬಳಿಕ ತಮ್ಮ ತಂದೆ ತಾಯಿಯರನ್ನು ಅಲಕ್ಷಿಸಿ ಸರಿಯಾಗಿ ನೋಡಿಕೊಳ್ಳದಿರುವುದು, ವೃದ್ಧಾಶ್ರಮಕ್ಕೆ ಅಟ್ಟುವುದು ಮೊದಲಾದ ಕ್ರಮಗಳ ಮೂಲಕ ಮಾನವತೆಗೇ ಕಳಂಕ ತಂದಿದ್ದಾರೆ. ನಿಮಗೆ ಗೊತ್ತೇ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ....?

          ಅಂದರೆ ತಂದೆ-ತಾಯಿಯನ್ನು ಪ್ರೀತಿಸುವುದು, ಅವರ ಬಾಳಸಂಜೆಯಲ್ಲಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು, ಮಕ್ಕಳಂತೆ ಸಲಹುವುದು ಮಕ್ಕಳಾದ ನಮ್ಮ  ಕರ್ತವ್ಯವಾಗಿದೆ.

ಮರಕ್ಕೆ ವಯಸ್ಸಾಗಿದೆ ಎಂದು ಎಂದೂ ಕಡಿಯಬೇಡಿ, ಅದು ಅಂಗಳದಲ್ಲಿ ಇರಲಿ ಬಿಡಿ,

ಅದು ಫಲ ಕೊಡದೇ ಇದ್ದರೂ ಸಹ ನೆರಳನ್ನಾದರೂ ಆವಶ್ಯಕವಾಗಿ ಕೊಡುತ್ತದೆ.

ಅಪ್ಪ-ಅಮ್ಮನಿಗೆ ವಯಸ್ಸಾಗಿದೆ ಎಂದು ಮನೆಯಿಂದ ಹೊರ ಹಾಕದಿರಿ, ಅವರು ಸಂಪಾದನೆ ಮಾಡದಿದ್ದರೂ

ನಿಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಅವಶ್ಯಕವಾಗಿ ನೀಡುತ್ತಾರೆ.

ಭೂಮಿಗಿಂತ ದೊಡ್ಡವಳು ತಾಯಿ, ಗಗನಕ್ಕಿಂತ ದೊಡ್ಡವನು ತಂದೆ ಎಂದು ಮಹಾಭಾರತ ಸಾರುತ್ತದೆ.

ಅಪ್ಪ ಅಮ್ಮ ನಿಜವಾಗಿಯೂ ಒಂದು ಸುಂದರ ಜಗತ್ತು. ಏಕೆಂದರೆ ಅಮ್ಮ ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸುತ್ತಾಳೆ, ಅಪ್ಪ ಪ್ರಪಂಚವನ್ನು ನಮಗೆ ಪರಿಚಯಿಸುತ್ತಾನೆ.

ಜೀವ ಅಮ್ಮನದು, ಜೀವನ ಅಪ್ಪನದು. ಹಸಿವೆ ತಿಳಿಯದಂತೆ ಅಮ್ಮ ನೋಡುತ್ತಾಳೆ, ಹಸಿವಿನ ಬೆಲೆ ಅಪ್ಪ ತಿಳಿಸಿಕೊಡುತ್ತಾನೆ.

ಅಮ್ಮ ಭದ್ರತೆಯಾದರೆ, ಅಪ್ಪ ಬಾಧ್ಯತೆಯಾಗುತ್ತಾನೆ. ಬೀಳದಂತೆ ಹಿಡಿಯಬೇಕು ಎಂದು ಅಮ್ಮ ನೋಡುತ್ತಾಳೆ, ಬಿದ್ದರೂ ಮೇಲೆ ಏಳಬೇಕೆಂದು ಅಪ್ಪ ಹೇಳುತ್ತಾನೆ.

ನಡೆಸುವುದು ಅಮ್ಮನಾದರೆ ನಡವಳಿಕೆ ಅಪ್ಪನಿಂದ...ಅಮ್ಮ ಆಲೋಚನೆಯಾದರೆ ಅಪ್ಪ ಆಚರಣೆ.

ಅಮ್ಮನ ಪ್ರೇಮವನ್ನು ನಾವು  ಹಸುಳೆ ಇರುವಾಗಲೇ ತಿಳಿದುಕೊಳ್ಳುತ್ತೇವೆ...ಆದರೆ ಅಪ್ಪನ ಪ್ರೇಮವನ್ನು ನಾವು  ತಂದೆ ಆದಾಗ ಮಾತ್ರ ತಿಳಿದುಕೊಳ್ಳುತ್ತೇವೆ.,

            ಹೀಗೆ ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಪ್ರೀತಿಸುವ ಜೀವಿಗಳು ನಮ್ಮ ತಾಯಿ-ತಂದೆ.  ನಿಸ್ವಾರ್ಥ ಪ್ರೀತಿ ನೀಡುವ ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರು.

ಉತ್ತಮ ಶಿಕ್ಷಣವನ್ನು ನಾವು ಶಾಲಾ ಕಾಲೇಜುಗಳಲ್ಲಿ ಪಡೆದರೂ ಬಾಳದೋಣಿಯಲಿ ಈಜಾಡುವ ಶಿಕ್ಷಣವನ್ನು ನಮ್ಮ ತಂದೆ ತಾಯಿಯರು ಮಾತ್ರ ನೀಡುತ್ತಾರೆ. ಈ ತರಬೇತಿ ಯಾವುದೇ ಶಾಲೆ ನೀಡಲು ಸಾಧ್ಯವಿಲ್ಲ....ಉತ್ತಮ ಸಂಸ್ಕಾರ, ವಿನಯ, ನಡೆ ನುಡಿ, ಹಿರಿಯರಿಗೆ ನೀಡುವ ಗೌರವ, ಕಷ್ಟಕ್ಕೆ ನೆರವಾಗುವ ಗುಣ, ಎದೆಗುಂದದೇ ಮುನ್ನುಗ್ಗಲು, ಸೋತಾಗ ಮತ್ತೆ ಎದುರಿಸಲು, ಬಿದ್ದಾಗ ಎದ್ದೇಳಲು, ಜಗತ್ತಿನ ಕೃತ್ರಿಮತೆಗಳನ್ನು ಅರಿಯಲು, ನಯವಂಚನೆ ಮೊದಲಾದವುಗಳನ್ನು ಅರಿಯುವ ಮೊದಲಾದ ನೂರಾರು ವಿದ್ಯೆಗಳನ್ನು ಪಾಲಕರ ಹೊರತಾಗಿ ಯಾವುದೇ ಶಾಲೆಯಲ್ಲಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಮಕ್ಕಳಿಗೆ ತಂದೆ ತಾಯಿಯರೇ ಜೀವನದ ಅತ್ಯುತ್ತಮ ಶಿಕ್ಷಕರಾಗಿದ್ದಾರೆ.

ಜನ್ಮ  ಕೊಟ್ಟ ತಂದೆ ತುತ್ತು ಕೊಟ್ಟ ತಾಯಿ

ಬದುಕು ಕೊಟ್ಟ ಭಗವಂತ ವಿದ್ಯೆ ಕೊಟ್ಟ ಗುರು ಇವರನ್ನು ನಾವೆಂದಿಗೂ ಮರೆಯಬಾರದು.

ತಂದೆ ತಾಯಿಯ ಕಣ್ಣಿನಲ್ಲಿ ಎರಡೇ ಸಲ ಕಣ್ಣೀರು ಬರುತ್ತದೆ. ಒಂದು ಮಗಳನ್ನು ಧಾರೆಯೆರೆದು ಕೊಡುವಾಗ.... ಮತ್ತು ತನ್ನ ಸ್ವಂತ ಮಗನಿಂದಲೇ ಮನೆಯಿಂದ ಹೊರಹಾಕುವಾಗ.

ನೆನಪಿರಲಿ ಪತ್ನಿ, ಗೆಳೆಯ ಗೆಳೆತಿಯರು ನಮ್ಮ ಸ್ವಂತ ಆಯ್ಕೆಯಿಂದ ಸಿಗುತ್ತಾರೆ ಆದರೆ ತಾಯಿ ತಂದೆ ಮಾತ್ರ ನಮ್ಮ ಪುಣ್ಯದಿಂದ ಸಿಗುತ್ತಾರೆ. ಅವರನ್ನು ಯಾವತ್ತೂ ನಿರ್ಲಕ್ಷಿಸಬೇಡಿರಿ.  ಇಷ್ಟು ಹೇಳಿ ನನ್ನ ಚಿಕ್ಕ ಭಾಷಣ ಮುಗಿಸುತ್ತೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು