ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ಅಕ್ಕಲಕೋಟೆಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ: ಸರ್ವಾಧ್ಯಕ್ಷರಾಗಿ ಎಸ್.ಕೆ. ಬಿರಾಜದಾರ ಆಯ್ಕೆ

 ಅಕ್ಕಲಕೋಟೆಯಲ್ಲಿ ಗಡಿನಾ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ:  ಸರ್ವಾಧ್ಯಕ್ಷರಾಗಿ ಎಸ್.ಕೆ. ಬಿರಾದಾರ ಆಯ್ಕೆ


        ಅಕ್ಕಲಕೋಟೆ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರ ಇವರ ಸಂಯುಕ್ತ ಆಶ್ರಯದಲ್ಲಿ “ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ” ಮತ್ತು “ನಲಿಕಲಿ ಸಾಹಿತ್ಯ ವಿತರಣಾ ಸಮಾರಂಭ”  ಕನ್ನಡದ ಭದ್ರ ಕೋಟೆ ಅಕ್ಕಲಕೋಟೆಯಲ್ಲಿ  ದಿ. 21 ಅಗಷ್ಟ 2025 ರಂದು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದ ಸರ್ವಾಧ್ಯಕ್ಷರಾಗಿ  ಅಕ್ಕಲಕೋಟ ತಾಲೂಕಿನ ಕನ್ನಡ ಪ್ರೇಮಿ ಶಿಕ್ಷಣ ಪ್ರೇಮಿಯಾಗಿರುವ ಹಿರಿಯರು, ಪ್ರಾಥಮಿಕ ಶಿಕ್ಷಕರ ನಾಯಕರು ಹಾಗೂ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀ. ಎಸ್. ಕೆ. ಬಿರಾಜದಾರ ಸರ್ ಅವರನ್ನು ಆಯ್ಕೆ ಮಾಡಲಾಗಿದೆ.

        ಆದರ್ಶ ಕನ್ನಡ ಬಳಗ, ಮಹಾರಾಷ್ಟ್ರವು ಪ್ರತಿವರ್ಷ ಗಡಿನಾಸಾಹಿತ್ಯ ಸಮ್ಮೇಳನಗಳನ್ನು ಆಯೋಜನೆ ಮಾಡಿ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ಕ್ರೀಡಾ- ಮನೋರಂಜನೆಯ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವ ನೀಡಿ ಸನ್ಮಾನಿಸುತ್ತಾ ಬರುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

        ಅಕ್ಕಲಕೋಟೆ ತಾಲೂಕಿನಲ್ಲಿ ಕನ್ನಡದ ಪ್ರಸಾರ ಮಾಡುವಲ್ಲಿ ಹಾಗೂ ಕನ್ನಡ ಉಳಿಸುವ ಸಲುವಾಗಿ ಸತತ ಪ್ರಯತ್ನ ಮಾಡಿರುವ ಎಸ್.ಕೆ. ಬಿರಾಜದಾರ ಅವರು ತಮ್ಮ ಶಾಂತ ಸ್ವಭಾವ ಹಾಗೂ ಸತತ ಕಾರ್ಯ ತತ್ಪರತೆಯಿಂದ ಎಲ್ಲರಿಗೆ ಆತ್ಮೀಯರಾಗಿದ್ದು ಎಲ್ಲರೂ ಅವರನ್ನು ಅಕ್ಕರೆಯಿಂದ ಎಸ್.ಕೆ. ಗುರೂಜಿ ಎಂದು ಕರೆಯುತ್ತಾರೆ. ಕನ್ನಡ ಶಾಲೆಗಳ ಯಾವುದೇ ಸಮಸ್ಯೆಗಳು, ಶಿಕ್ಷಕರ ಸಮಸ್ಯೆಗಳು, ಸೇವಾ ಪುಸ್ತಕ ಬರೆಯುವ ವಿಷಯ, ವೇತನದ ಸಮಸ್ಯೆ ಹೀಗೆ ಕರೆದವರ ಧ್ವನಿಗೆ ಓಗೊಟ್ಟು ಹಾಜರಾಗಿ ಸಮಸ್ಯೆಗೆ ತಕ್ಕ ಪರಿಹಾರ ನೀಡುವ ಅವರ ಆತ್ಮೀಯತೆಯ ಗುಣದಿಂದ ಎಲ್ಲರಿಗೂ ಹತ್ತಿರವಾಗಿದ್ದಾರೆ.  

        ಅಕ್ಕಲಕೋಟೆಯ ಶಾಸಕರಾದ ಸಚಿನ್ ದಾದಾ ಕಲ್ಯಾಣಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿದ್ದು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಘನಾಧ್ಯಕ್ಷತೆ ವಹಿಸಲಿದ್ದಾರೆ. ಕಲ್ಬುರ್ಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮಹಾರಾಷ್ಟ್ರದಲ್ಲಿಯ ಕನ್ನಡ ಶಾಲೆಗಳಿಗೆ ನಲಿ ಕಲಿ ಸಾಹಿತ್ಯ ವಿತರಣೆ ಮಾಡಲಿದ್ದಾರೆ.  ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಹಲವು ಸಾಹಿತ್ಯ-ಸಾಂಸ್ಕೃತಿಕ ಗೋಷ್ಠಿಗಳು, ಕನ್ನಡ ಸಂಸ್ಕೃತಿ, ವೈಭವ ತೋರಿಸುವ ಕಲಾ ಪ್ರದರ್ಶನೆಗಳು ನಡೆಯಲಿದ್ದು ಯುವ ಕವಿ ಡಾ. ಗಿರೀಶ ಜಾಕಾಪುರೆಯವರ ಹೊಸ ಕೃತಿ “ಪಾರಿವಾಳ ಮತ್ತು ಅಗ್ಗಷ್ಟಿಕೆ” ಬಿಡುಗಡೆ ಮಾಡಲಾಗುವುದು.

        ಸಮಾಜಮುಖಿ ಚಿಂತನೆ, ಕನ್ನಡ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ  ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ಗಡಿನಾಡಿನ ಸಾಧಕ ಕನ್ನಡಿಗರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆದರ್ಶ ಕನ್ನಡ ಬಳಗದ ಅಧ್ಯಕ್ಷರು ಮಲಿಕ್ ಜಾನ ಶೇಖ ಗಡಿನಾಡಿನ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಈ ಮಹತ್ವದ ಸಮಾರಂಭವನ್ನು ಭವ್ಯವಾಗಿ ಯಶಸ್ವಿಗೊಳಿಸಬೇಕು” ಎಂದು ಸುದ್ದಿಗೋಷ್ಟಿಯಲ್ಲಿ ಅವ್ಹಾಹನೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ಆದರ್ಶ ಕನ್ನಡ ಬಳಗದ ಉಪಾಧ್ಯಕ್ಷ ರಾಜಶೇಖರ ಉಮರಾಣಿಕರ, ಡಾ. ಗಿರೀಶ ಜಾಕಾಪುರೆ, ವಿದ್ಯಾಧರ ಗುರವ, ಬಸವರಾಜ ಧನಶೆಟ್ಟಿ, ಮಹೇಶ ಮ್ಹೇತ್ರೆ, ಶರಣಪ್ಪ ಫುಲಾರಿ, ಪ್ರಶಾಂತ ಬಿರಾಜದಾರ ಸೇರಿದಂತೆ ಹಲವಾರು ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು.  

        ಒಬ್ಬ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಕನ್ನಡ ಸಮಾರಂಭದ ಸರ್ವಾಧ್ಯಕ್ಷರನ್ನಾಗಿ ಮಾಡುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮಹಾರಾಷ್ಟ್ರದಲ್ಲಿ ನಿಜಕ್ಕೂ ಕನ್ನಡ ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಪ್ರಾಥಮಿಕ ಶಿಕ್ಷಕರೇ ಮಾಡುತ್ತಿದ್ದಾರೆ. ಆದರ್ಶ ಕನ್ನಡ ಬಲಗಾವು ನನ್ನನ್ನು ಆಯ್ಕೆ ಮಾಡಿದ್ದು ನನಗೆ ಇನ್ನೂ ಕನ್ನಡಾಂಬೆಯ ಸೇವೆ ಮಾಡಲು ಪ್ರೇರಣೆ ನೀಡಿದೆ.

                                                                -  ಎಸ್. ಕೆ. ಬಿರಾಜದಾರ, ಸರ್ವಾಧ್ಯಕ್ಷರು.  

 

        ಪ್ರಪ್ರಥಮ ಬಾರಿಗೆ ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ನಲಿ ಕಲಿ ಸಾಹಿತ್ಯ ವಿತರಿಸುತ್ತಿದ್ದೇವೆ. ಅದೇ ರೀತಿಯಾಗಿ ಕನ್ನಡ ಶಾಲೆಗಳಿಗೆ ವಾಚನಾಲಯ ಪುಸ್ತಕ ಮತ್ತು ಮಕ್ಕಳಿಗೆ ಕೈಪಿಡಿಯನ್ನು ವಿತರಿಸಲಾಗುತ್ತಿದೆ. ಸದಾ ಮಹಾರಾಷ್ಟ್ರದ ಕನ್ನಡಿಗರ ಬೆನ್ನೆಲುಬಾಗಿ ನಿಲ್ಲಲಿದೆ.         

            -ಸೋಮಣ್ಣ ಬೇವಿನಮರದ, ಅಧ್ಯಕ್ಷರು  ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು