ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ವಿಶ್ವ ಮಹಿಳಾ ದಿನ" - Universal Women's Day

 "ವಿಶ್ವ ಮಹಿಳಾ ದಿನ" Universal Women's Day 



              ವಿಶ್ವ ಮಹಿಳಾ ದಿನ ಎಂಬ ಕಲ್ಪನೆ ಮೊದಲಿಗೆ ಬಂದದ್ದು 1911 ರಲ್ಲಿ. ಇದಕ್ಕೂ ಮೊದಲು ಅಲ್ಲಲ್ಲಿ ಮಹಿಳಾ ದಿನವೆಂಬ ಆಚರಣೆಯಿದ್ದರೂ ಕೂಡ ಅದು ಮೊದಲಿಗೆ ಅಂತರ್ರಾಷ್ಟ್ರೀಯ ಆಚರಣೆಯೆಂದು ಗುರುತಿಸಿಕೊಂಡದ್ದು 1911ರ ಮಾರ್ಚ್ 19 ರಂದು. ಆ ವರ್ಷ ಮಹಿಳೆಗೆ ಮತ ಚಲಾವಣೆ ಹಾಗೂ ಸಾರ್ವಜನಿಕ ಕಛೇರಿಗಳನ್ನು ನಡೆಸುವ ಹಕ್ಕಿಗಾಗಿ ಒತ್ತಾಯಿಸಲಾಯಿತು. ಅಲ್ಲದೆ ಉದ್ಯೋಗಗಳಲ್ಲಿ ಲೈಂಗಿಕ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಹೀಗೆ ಆರಂಭವಾದ ಮಹಿಳಾ ದಿನಾಚರಣೆ ಮಾರ್ಚ್ 8 ರಂದು ನಡೆದಿರಲಿಲ್ಲ, ಆದರೆ ಈಗ ಎಲ್ಲೆಡೆ ಮಾರ್ಚ್ 8 ರಂದೇ ನಡೆಸಲಾಗುತ್ತಿದೆ. ಬಹುಷಃ ಇದಕ್ಕೆ ಕಾರಣ 1917(೧೯೧೭)ರ ಮಹಿಳಾ ದಿನ ಮಾರ್ಚ್ 8ರಂದು ಇತ್ತು ಎಂಬುದೇ ಇರಬೇಕು. 1917(೧೯೧೭)ರ ಮಹಿಳಾ ದಿನಾಚರಣೆ ರಷ್ಯಾದಲ್ಲಿ ಬಹಳ ತೀವ್ರವಾಗಿ ನಡೆಯಿತು. ಮೊದಲನೆ ಮಹಾಯುದ್ಧ ನಿಲ್ಲಿಸಬೇಕೆಂದು ಹಾಗೆಯೇ ರಷ್ಯಾದಲ್ಲಿನ ಆಹಾರದ ಕೊರತೆಯ ವಿರುದ್ಧ ಮಹಿಳೆಯರು ಬೀದಿಗಿಳಿದು ಚಳುವಳಿ ನಡೆಸಿದರು. "ಅಹಾರ ಮತ್ತು ಶಾಂತಿ"(Bread and Peace) ಎಂಬುದು ಆ ವರ್ಷದ ಮಹಿಳಾ ದಿನಾಚರಣೆಯ ಮಂತ್ರವಾಗಿತ್ತು. ಆ ವರ್ಷದ ಮಹಿಳಾ ದಿನದ ಚಳುವಳಿ ರಷ್ಯಾದ ಕಾರ್ಮಿಕ ಚಳುವಳಿಗಳ ಜೊತೆಗೂಡಿ ಅಂತಿಮವಾಗಿ ರಷ್ಯಾದಲ್ಲಿ ತ್ಸಾರ(ರಷ್ಯಾದ ಚಕ್ರವರ್ತಿ, ಸಾರ್ವಭೌಮ)ನ ಆಳ್ವಿಕೆ ನಿಂತಿತು. ತ್ಸಾರನು ದಂಗೆಯನ್ನು ಹತ್ತಿಕ್ಕಲು ಸೈನ್ಯವನ್ನು ಉಪಯೋಗಿಸಲು ನೋಡಿದನಾದರೂ, ಚಳುವಳಿಯಲ್ಲಿ ಮಹಿಳೆಯರೇ ಅಧಿಕವಾಗಿದ್ದರಿಂದ ಸೈನ್ಯವೂ ಅದನ್ನು ಹತ್ತಿಕ್ಕಲು ಹಿಂಜರಿಯಿತು! ಕೊನೆಗೆ ತ್ಸಾರನು ಬಲವಂತದಿಂದ ಸೈನ್ಯವನ್ನು ಉಪಯೋಗಿಸಲು ನೋಡಿದಾಗ, ಸೈನ್ಯವೇ ತ್ಸಾರನ ವಿರುದ್ಧ ಬಂಡಾಯವೆದ್ದಿತು! ಹೀಗೆ ಶತಮಾನದ ಹಿಂದೆಯೇ ರಷ್ಯಾದ ಚಕ್ರವರ್ತಿಯ ಎದುರು ಸ್ತ್ರೀಶಕ್ತಿ ಗೆದ್ದಿತ್ತು.

            ಹೀಗೆ 1911(೧೯೧೧)ರ ಮಹಿಳಾ ದಿನಾಚರಣೆಗೆ ಐತಿಹಾಸಿಕ ಮಹತ್ವ ದೊರೆತ ಕಾರಣದಿಂದ, ಹಾಗೂ ಆ ವರ್ಷ ಅದು ಮಾರ್ಚ್ 8ರಂದು ನಡೆದಿದ್ದರಿಂದ ಬಹುಷಃ ನಂತರದ ವರ್ಷಗಳಲ್ಲಿ ಮಾರ್ಚ್ 8ರ ತಾರೀಖು ಖಾಯಂ ಆಯಿತು. ಅಮೆರಿಕ ವಿಶ್ವ ಮಹಿಳಾ ದಿನವನ್ನು ಒಪ್ಪಿಕೊಂಡದ್ದು 1994(೧೯೯೪)ರಲ್ಲಿ. ವಿಶ್ವ ಸಂಸ್ಥೆ 1975(೧೯೭೫)ರಿಂದ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದೆ. ಪ್ರತಿ ವರ್ಷಕ್ಕೂ ವಿಶ್ವ ಸಂಸ್ಥೆ ವಿಷಯ ಅಥವಾ ಮಂತ್ರವೊಂದನ್ನು ಗುರುತಿಸುತ್ತದೆ. 

               ಭಾರತದಲ್ಲಿ ಮಹಿಳಾ ದಿನಾಚರಣೆಗೆ ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆ ಏನೂ ಇಲ್ಲವಾದರೂ, ಭಾರತದಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಧಾರಣವಾಗಿ ಗಂಡಸರು ಮಹಿಳೆಯರಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ. ಆದರೆ ಭಾರತಕ್ಕೆ ಮಹಿಳಾ ಸಮಾನತೆ ಎಂಬುದು ಹೊಸ ಕಲ್ಪನೆಯೇನಲ್ಲ. ಅರ್ಧನಾರೀಶ್ವರ ಎಂಬ ಅದ್ಭುತ ಕಲ್ಪನೆ ಹುಟ್ಟಿದ್ದು ಭಾರತದಲ್ಲಿ. ಪ್ರಕೃತಿ ಅಥವಾ ಹೆಣ್ಣು ಹಾಗೂ ಪುರುಷ ಅಥವಾ ಗಂಡು ಒಬ್ಬರಿಂದೊಬ್ಬರು ಬೇರೆ ಅಲ್ಲ, ಸೃಷ್ಟಿಯಲ್ಲಿ ಇವರಿಬ್ಬರದು ಸಮಪಾಲು ಎಂಬುದೇ ಅರ್ಧನಾರೀಶ್ವರ ಎಂಬ ಕಲ್ಪನೆಯ ಸಂಕ್ಷಿಪ್ತ ಅರ್ಥ. ಪಶ್ಚಿಮ ರಾಷ್ಟ್ರಗಳ ಸಂಸ್ಕೃತಿಯಲ್ಲೆಲ್ಲೂ ಹೆಣ್ಣಿಗಿಲ್ಲದ ದೈವಿಕ ಪಟ್ಟವನ್ನು ಕೊಟ್ಟಿದ್ದು ಭಾರತೀಯರು. ಋಗ್ವೇದದಲ್ಲಿ ಲೋಪಾಮುದ್ರ ಹಾಗೂ ವಾಕ್ ಅಂಬ್ರಿಣಿ ಎಂಬ ಆ ಕಾಲದ ಪ್ರಬಲ ನಾರಿಯರ ಕೊಡುಗೆ ಇದೆ. ನಮ್ಮ ಗಾಯತ್ರಿ ಮಂತ್ರ ಕೂಡ ವೇದಗಳ ತಾಯಿಯೆಂದು ಕರೆಯಲ್ಪಡುವ ಗಾಯತ್ರಿಯನ್ನು ಕುರಿತಾಗಿದೆ. ವೇದಕಾಲದಲ್ಲಿ ಸಮಾಜದಲ್ಲಿ ನಾರಿಗೆ ಪುರುಷನಿಗೆ ಸಮಾನವಾದ ಹಕ್ಕುಗಳಿದ್ದವು. ಶಿಕ್ಷಣದಲ್ಲಿ ಸಮಾನತೆಯಿತ್ತು, ಆರ್ಥಿಕ ವಿಚಾರಗಳಲ್ಲಿ ಪತಿ ಪತ್ನಿಯ ಸಲಹೆ ಕೇಳುತ್ತಿದ್ದ. 

              ಆದರೆ ಒಂದು ಹಂತದಲ್ಲಿ ಭಾರತೀಯ ಸಂಸ್ಕೃತಿ ಹೆಣ್ಣಿಗೆ ಕೊಟ್ಟ ದೈವಿಕ ಪಟ್ಟವೆ ಅವಳಿಗೆ ಮುಳುವಾಯಿತೆ ಎಂಬ ಪ್ರಶ್ನೆಯೂ ಬರುತ್ತದೆ. ನಾರಿ ಕ್ಷಮಯಾಧರಿತ್ರಿ ಹೌದು, ಆದರೆ ತನಗಾಗುವ ಎಲ್ಲ ಅನ್ಯಾಯವನ್ನೂ ಸಹಿಸಿಕೊಳ್ಳಬೇಕೆ? ತಾಳ್ಮೆ, ಕರುಣೆ ಮುಂತಾದ ನಾರಿಯ ಗುಣಗಳು ಸಮಾಜದಲ್ಲಿ ಅವಳ ಸಮಾನತೆಯನ್ನು ಪುರುಷರು ಕಸಿದುಕೊಳ್ಳಲು ಕಾರಣವಾಯಿತೆ? ಭಾರತೀಯ ಸಂಸ್ಕೃತಿಯ ಉದಾತ್ತ ತತ್ವಗಳ ಅಪಹಾಸ್ಯವೆಂಬಂತೆ ನಮ್ಮಲ್ಲಿ ಸತೀ ಪದ್ಧತಿ, ವರದಕ್ಷಿಣೆ ಮುಂತಾದ ಪಿಡುಗುಗಳು ಹುಟ್ಟಿಕೊಂಡವು. ಹೆಣ್ಣಿಗೆ ಶಿಕ್ಷಣ ಇಲ್ಲದಾಯಿತು. ಈಚೆಗೆ ಹೆಚ್ಚಾಗಿ ವರದಿಯಾಗುತ್ತಿರುವ ಅತ್ಯಾಚಾರದಂಥ ಕ್ರೂರ ಅಪರಾಧಗಳಿಗೆ ಕೂಡ ಭಾರತೀಯರು ಸಾಕ್ಷಿಯಾದರು. ಸಮಾಜದಲ್ಲಿ ಹೆಣ್ಣಿನ ಸ್ಥಾನ ಕುಸಿದಂತೆ ಹೆಣ್ಣನ್ನು ಹೆರುವುದೇ ಅಪರಾಧ ಎಂಬಂತಾಯಿತು. ಸ್ತ್ರೀ ಭ್ರೂಣ ಹತ್ಯೆ ಪ್ರಾರಂಭವಾಯಿತು. ಆದರೆ ಇದೆಲ್ಲ ಭಾರತೀಯ ಸಂಸ್ಕೃತಿಯ ದೋಷ ಎಂದುಕೊಳ್ಳುವುದು ತಪ್ಪು. ನಮ್ಮ ಸಂಸ್ಕೃತಿಯ ತತ್ವಗಳು ಪಾಲನೆಯಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.


            ಭಾರತದಲ್ಲಿ ಹೆಣ್ಣಿಗೆ ಸಮಸ್ಯೆಗಳೇನೆ ಇದ್ದರೂ, ಅವುಗಳನ್ನೆಲ್ಲ ಬಗಲಿಗಿಟ್ಟು ಮಹಿಳೆ ಎಲ್ಲ ರಂಗಗಳಲ್ಲೂ ಪುರುಷನಿಗೆ ಸಮಾನವಾಗಿ ಸಾಧನೆಗೈಯುತ್ತಿದ್ದಾಳೆ. ಭಾರತ ಹೆಣ್ಣು ಪ್ರಧಾನಿಯಾಗಿದ್ದನ್ನು, ರಾಷ್ಟ್ರಪತಿಯಾಗಿದ್ದನ್ನು ಕಂಡಿದೆ. ಭಾರತ ಅವರಿಗೆ ಒಂದು ವೇದಿಕೆ ಒದಗಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಖ್ಯಾತ ಬಹುರಾಷ್ಟ್ರೀಯ ಕಂಪೆನಿಗಳ ಹಿಂದೆ ಗಂಡಿಗೆ ಸಮಾನಶಕ್ತಿಯಾಗಿ ದುಡಿದ ಮಹಿಳೆಯರಿದ್ದಾರೆ. ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದಾಳೆ ಹೆಣ್ಣು. ಸಾಂಸ್ಕೃತಿಕ ಕ್ಷೇತ್ರದಲ್ಲೂ ಹಿಂದುಳಿದಿಲ್ಲ. ರಂಗಭೂಮಿ, ಸಂಗೀತ, ಕಲೆ, ಚಲನಚಿತ್ರ - ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣಿನ ಸಾಧನೆ ಮುಂದುವರೆದಿದೆ. ಮೊದಲೆಲ್ಲ ಚಲನಚಿತ್ರಗಳಲ್ಲಿ ನಟನೆಯಲ್ಲಿ ಹೆಸರು ಮಾಡುತ್ತಿದ್ದರೆ, ಈಗ ತಾಂತ್ರಿಕ ಕೆಲಸಗಳಿಗೂ ಹೆಣ್ಣು ಕೈ ಹಾಕಿ ಯಶಸ್ವಿಯಾಗಿದ್ದಾಳೆ. ಹೆಸರುಗಳು ಅನಗತ್ಯ, ಈ ಸಾಲುಗಳನ್ನು ಓದುತ್ತಿದ್ದಂತೆ ನಿಮ್ಮ ಮನದಲ್ಲಿ ಆ ಹೆಸರುಗಳು ಬಂದೇ ಬರುತ್ತವೆ. 


              ಸಮಾನತೆ ಎಂದರೆ "ಯಾರು ಮೇಲು, ಒಂದು ಕೈ ನೋಡಿಯೇ ಬಿಡೋಣ" ಎಂಬ ಪೈಪೋಟಿಯಲ್ಲ. ಇಬ್ಬರು ಪರಸ್ಪರ ಅರಿತುಕೊಂಡು, ಒಬ್ಬರನ್ನೊಬ್ಬರು ತಿದ್ದಿಕೊಂಡು, ಒಬ್ಬರ ಕೊರತೆಯನ್ನು ಇನ್ನೊಬ್ಬರು ನೀಗಿಸುವುದು ಸಮಾನತೆ. ಒಬ್ಬರಿಗೊಬ್ಬರು ಪೂರಕವಾಗಿರಬೇಕು, ಒಬ್ಬರನ್ನು ಇನ್ನೊಬ್ಬರು ಸಂಪೂರ್ಣಗೊಳಿಸಬೇಕು - ಅರ್ಧನಾರೀಶ್ವರದ ಕಲ್ಪನೆಯೇ ಇದು. 

               ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಹೆಣ್ಣು ನಿರ್ವಹಿಸುವ ಪಾತ್ರಗಳು ಹಲವು. ಗಂಡು ಅವಳಿಗೆ ಸಮಾನನಲ್ಲ, ಹೆಣ್ಣೇ ಗಂಡಿಗಿಂತ ಬಲಶಾಲಿ ಎಂಬ ಮಾತು ಸುಳ್ಳಲ್ಲ. ಇದು ಸೃಷ್ಟಿ ಹೆಣ್ಣಿಗೆ ಕೊಟ್ಟ ಶಕ್ತಿ. ಹಾಗೆಯೇ ಗಂಡು ಈ ಶಕ್ತಿಯನ್ನು ಅರಿತು, ಅದರ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಮಹಿಳಾ ದಿನವು ನಮ್ಮಲ್ಲಿ ಹೆಣ್ಣಿನ ಕುರಿತ ಗೌರವಭಾವನ್ನು ಹೆಚ್ಚಿಸಲಿ. ಸಮಾನತೆಗಾಗಿ ಹೆಣ್ಣು ಹೋರಾಡುವಂತಾಗುವುದು ಬೇಡ, *ಹೆಣ್ಣಿಗೆ ಭಾರತ ಸಂಸ್ಕೃತಿಯಲ್ಲಿ ಮೊದಲಿನಿಂದಲೆ ಇದ್ದ ಅವಳ ಅರ್ಹ ಸ್ಥಾನ ದೊರಕಲಿ ಎಂದು ಆಶಿಸೋಣ*. ( ಸಂಗ್ರಹ)

ಎಲ್ಲರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

                                                             -ರವೀಂದ್ರ.ಆರ್.ಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು