ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

Sant Sevalal Maharaj - ಏಕತೆಯ ಸಂದೇಶ ನೀಡಿದ ಆಧುನಿಕ ಸಂತ -ಶ್ರೀ ಸೇವಾಲಾಲ ಮಹಾರಾಜ

Sant Sevalal Maharaj Jayanti Vishesh - Article 

                      (ಚಿತ್ರ ಕೃಪೆ- ಶ್ರೀ. ಶರಣಪ್ಪ ಲೋಡ್ಡೆನವರು, ಭೀಮನಗರ ದುಧನಿ ತಾ. ಅಕ್ಕಲಕೋಟ ಜಿ. ಸೋಲಾಪುರ) ಲಂಬಾಣಿ ಸಮಾಜವು ನಿಸರ್ಗದ ಪೂಜೆ ಮಾಡುವ ಸಮಾಜವಾಗಿದೆ. ನಿಸರ್ಗದ ಭಾಗವಾದ ಪೃಥ್ವಿ, ಜಲ, ವಾಯು, ಸೂರ್ಯ, ಆಗ್ನಿಗಳ ಪೂಜೆಯನ್ನು ಅನಾದಿಕಾಲದಿಂದಲೂ ಮಾಡುತ್ತ ಬಂದಿರುತ್ತದೆ. ಮಾನವನ ಶರೀರವು ಈ ಪಂಚತತ್ವಗಳಿಂದ ನಿರ್ಮಾಣಗೊಂಡಿದ್ದು ಇವುಗಳಲ್ಲಿಯೇ ಲೀನವಾಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಮಣ್ಣಿನ ಮಗ ಮಣ್ಣಿಗೆ ಸೇರುವನು ಎಂದು ನಾವು ಆಗಾಗ ಹೇಳುತ್ತಿರುತ್ತೇವೆ. ಮಾಟಿ ಕಾ ಪುತಲಾ ಮಾಟಿ ಮೇ ಹಿ ಮಿಲ ಜಾಯೇಗಾ. ಇಂಥ ನಿಸರ್ಗದ ಭಕ್ತ ಹಾಗೂ ಸತ್ತಿದೇವಿಯರ ಭಕ್ತರಾಗಿದ್ದ (ತುಳಜಾ ಭವಾನಿ, ಜಗದಂಬಾ, ಶೀತಲಾದೇವಿ, ಮಂಥರಾಳ ದೇವಿ, ಆದಿಶಕ್ತಿ, ಹಾಗಲಾದೇವಿ ಮತ್ತು ಅಂಬೆ.)ಭುಕ್ಯಾ ರಾಮಾವತ ರಾಮಜಿ ನಾಯಕ ತಮ್ಮ ಸಮಾಜದ ೩೬೦ ಕುಟುಂಬಗಳೊಂದಿಗೆ ಗುತ್ತಿಕೋಟೆ-ಗುಲಾಲದೊಡ್ಡಿಗೆ ಬಂದು ತಮ್ಮ ಬಿಡಾರ ಹೂಡಿದರು. ರಾಮಜಿನಾಯಕರಿಗೆ ಮೂವರು ಮಕ್ಕಳು- ಭೀಮಾನಾಯಕ, ಹೇಮಾನಾಯಕ ಹಾಗೂ ಖೇಮಾನಾಯಕ. ಭೀಮಾನಾಯಕನಿಗೆ ಚಿತ್ರದುರ್ಗದ ಜಾಧವ ಇವರ ಮಗಳು ಧರ್ಮಿಣಿಬಾಯಿ ಎಂಬ ಕನ್ಯೆಯೊಂದಿಗೆ ಇ.ಸ. ೧೭೨೭ ರಲ್ಲಿ ಮದುವೆಯಾಯಿತು. ಸುಮಾರು ಹನ್ನೆರಡು ವರುಷಗಳ ನಂತರ ಅನೇಕ ಔಷಧೋಪಚಾರ, ದೇವಿ ದೇವತೆಗಳ ಆರಾಧನೆ ಮಾಡಿದ ನಂತರ ಸಪ್ತ ದೇವಿಯರ ಕೃಪೆಯಿಂದ ಭೀಮಾನಾಯಕ ಹಾಗೂ ಧರ್ಮಿಣಿಬಾಯಿ ದಂಪತಿಗಳಿಗೆ ಪುತ್ರರತ್ನ ಜನಿಸಿತು. ಆ ಶುಭ ದಿನವೇ ೧೫ ಫೆಬ್ರುವರಿ೧೭೩೯ ವಾರ ಸೋಮವಾರ ರೋಹಿಣಿ ನಕ್ಷತ್ರ. ಶಿವನ ಸ್ವರುಪಿಯಾದ ಮಗುವಿಗೆ ಸೇವಾಲಾಲ್ ಎಂದು ನಾಮಕರಣ ಮಾಡಲಾಯಿತು. ನಂತರ ಈ ದಂಪತಿಗಳಿಗೆ ಇನ್ನೂ ಮೂರೂ ಮಕ್ಕಳು ಹುಟ್ಟಿದರು-ಹಾಪಾ, ಬದು ಹಾಗೂ ಪುರಾ ಎಂದು ಕ್ರಮವಾಗಿ ಹೇಸರಿಸಲಾಯಿತು. ಇದು ಸ್ಥಳ ಆಗಿನ ಮೈಸೂರು ಪ್ರಾಂತದ ಹಾಗೂ ವರ್ತಮಾನದಲ್ಲಿ ಆಂದ್ರಪ್ರದೇಶದಲ್ಲಿಯ ಅನಂತಪುರ ಜಿಲ್ಲೆಯ ಗೊಲಾಲದೊಡ್ಡಿ ತಾಂಡಾ- ಗುತ್ತಿಬಳ್ಳಾರಿ ಎಂಬ ಹೆಸರಿನ ಊರು. ೧೭ನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಲಮಾಣಿ ಸಮಾಜದಲ್ಲಿ ಸೇವಾಲಾಲ ಮಹಾರಾಜರು ಒಬ್ಬ ಮಹಾನ ಸಂತರಾಗಿ ಹೋಗಿದ್ದಾರೆ. ಭೀಮಾನಾಯಕ ಹಾಗೂ ಅವನ ಅನುಯಾಯಿಗಳು ತಮ್ಮ ಉದರನಿರ್ವಹಣೆಗಾಗಿ ಗೋವುಗಳನ್ನು ಮೇಯಿಸುತ್ತಿದ್ದರು. ಅಲ್ಲಿಯ ಅರಸ ನಿಜಾಮನ ಪರಿಸರದಲ್ಲಿ ಹಾಲು, ಮೊಸರು, ಬೆಣ್ಣೆಯಾದಿಯಾಗಿ ಮಾರಾಟಮಾಡುತ್ತ ಅವನ ಸೈನ್ಯಕ್ಕೆ ರಸದ (ಆಹಾರ ಪದಾರ್ಥಗಳು ಹಾಗೂ ಯುದ್ದಸಾಮಗ್ರಿಗಳು) ತಮ್ಮ ದನ- ಎತ್ತುಗಳ ಮೇಲೆ ಹೇರಿಕೊಂಡು ತಲುಪಿಸುವ ಕೆಲಸ ಮಾಡುತ್ತಿದ್ದರು. ಕಾಲಾಂತರದಲ್ಲಿ ತಮ್ಮ ವ್ಯಾಪಾರ ಸ್ಥಗಿತಗೊಂಡ ನಂತರ ದಣಿದ ಭೀಮಾನಾಯಕನ ಕೆಲಸವನ್ನು ಸೇವಾಲಾಲನು ತನ್ನ ಹೆಗಲಿಗೆ ತೆಗೆದುಕೊಂಡು ೩೬೦ ಮನೆಗಳನ್ನು ಜೊತೆಗೆ ಕರೆದುಕೊಂಡು ಊರಿನಿಂದ ಊರಿಗೆ ಅಲೆಯುತ್ತ ವ್ಯಾಪಾರ ಮಾಡುತ್ತ ಲದೆಣಿಯನ್ನು ಹೊತ್ತುಕೊಂಡು ಮಹಾರಾಷ್ಟ್ರಕ್ಕೆ ಬಂದನು. 
                      ಹದಿನಾರನೆಯ ಹಾಗೂ ಹದಿನೇಳನೆಯ ಶತಮಾನದಲ್ಲಿ ಭಾರತದಲ್ಲಿ ಅನೇಕ ಲಂಬಾಣಿ ವ್ಯಾಪಾರಿಗಳು, ಸೇನಾಪತಿಗಳು, ರಾಜಮಹಾರಾಜರೂ ಆಗಿ ಹೋಗಿದ್ದಾರೆ. ಮಹಾರಾಣಾ ಪ್ರತಾಪನ ಸೇನಾಪತಿ ಜಯಮಲ್ ಫನ್ತಿಹಾ, ರಾಜಾ ರತನಸಿಂಗನ ಸರ ಸೇನಾಪತಿ ಹಾಗೂ ರಾಣಿ ರೂಪಮತಿಯ ಸಹೋದರ ಬಂಜಾರಾ ಗೋರಾ ಬಾದಲ, ಉತ್ತರದಲ್ಲಿ ಲಕ್ಕಿಶಹಾ ಬಣಜಾರಾ, ದಕ್ಷಿಣದಲ್ಲಿ ಜಂಗಿ-ಭಂಗಿ(ಭುಕಿಯಾ),ಮಧ್ಯ ಭಾರತದಲ್ಲಿ ಭಗವಾನದಾಸ ವಡತಿಯಾ ಹೀಗೆ ಅನೇಕ ನಾಮವಂತ ವ್ಯಕ್ತಿಗಳು ಆಗಿಹೋಗಿದ್ದಾರೆ. ಆದರೆ ಇವರೆಲ್ಲ ದೊಡ್ಡ ದೊಡ್ಡ ರಾಜ ಮಹಾರಾಜರಿಗಾಗಿ ಅಥವಾ ದೊಡ್ಡ ದೊಡ್ಡ ವ್ಯಾಪಾರಿಗಳಿಗಾಗಿ ಮಾತ್ರ ರಸದಪೂರೈಸುವ ಕೆಲಸ ಮಾಡುತ್ತಿದ್ದರು. ಸಾಮಾನ್ಯ ಜನರಿಗಾಗಿ ವಿಚಾರ ಮಾಡಿದ ಸೇವಾಲಾಲ ಮಹಾರಾಜರು ಮಾತ್ರ ಮಾದರಿಯ ಸಂತರಾಗಿದ್ದಾರೆ. ಅಂಥಹ ಸಂದರ್ಭದಲ್ಲಿ ತಮ್ಮ ನಿರಕ್ಷರ ಬಾಂಧವರಿಗೆ ಒಕ್ಕಟ್ಟಾಗಿ ಪ್ರಬೋಧನೆ ಮಾಡಿದರು. ಸಣ್ಣವನಿರುವಾಗಲೇ ಪ್ರಾಣಿಗಳ ಬಲಿ ಕೊಡಬಾರದು ಎಂದು ಹೇಳಿದರು. ದೇವರ ಹೆಸರಿನಲ್ಲಿ ಜೀವಂತ ಪ್ರಾಣಿಗಳ ಬಲಿ ಕೊಡುವುದು ತರವಲ್ಲ. ಸೃಷ್ಟಿಸಿದ ದೇವರೇ ತನಗಾಗಿ ಪ್ರಾಣಿಗಳ ಬಲಿ ಬೇಡುತ್ತಾನೆ ಎಂದರೆ ಒಪ್ಪಿಗೆಯಾಗುವುದಿಲ್ಲ. ನಿಮಗೆ ನಿಸ್ಪಾಪ ಪ್ರಾಣಿಗಳನ್ನು ಕೊಳ್ಳುವ ಹಕ್ಕು ಯಾರು ನೀಡಿದರು? ಎಂದು ವಾದಿಸಿದರು. ಅದರಂತೆ ಮಧ್ಯಸೇವನೆಯಿಂದ ಅನೇಕ ಕುಟುಂಬಗಳು ಹಾಳಾಗುತ್ತಿವೆ ಎಂದು ಮಧ್ಯ ತಯಾರಿಕೆ ಹಾಗೂ ಮಾರಾಟವನ್ನೂ ನಿಲ್ಲಿಸಿದರು. ಸ್ತ್ರೀಯರ ಮೇಲಿನ ದೌರ್ಜನ್ಯ್ ತಡೆಗಟ್ಟಲು ಕೈಯಲ್ಲಿ ಖಡ್ಗವನ್ನೂ ತೆಗೆದುಕೊಂಡರು. ಬಡ ಲಮಾಣಿ ವ್ಯಾಪಾರಿಗರಿಂದ ನಿಜಾಮನು ಹೆಚ್ಚು ತೆರಿಗೆಯನ್ನು ವಸೂಲು ಮಾಡುವ ನಿಯಮ ಜಾರಿಗೆ ತಂದಿದನು.. ಅದನ್ನು ವಿರೋಧಿಸಿ ನಿಜಾಮನ ವೈರತ್ವವನ್ನೂ ಪಡೆದುಕೊಂಡನ್ನಲ್ಲದೆ ತೆರಿಗೆಯನ್ನು ರದ್ದು ಪಡಿಸುವಂತೆ ಆಗ್ರಹದ ಹೋರಾಟವನ್ನು ಮಾಡಿದನು. ಭೂಗಳ್ಳರವಿರುದ್ಧ ಪ್ರತಿಭಟನೆಯು ಮಾಡಿ ನಿಜಾಮನಿಂದ ಸ್ನೇಹತ್ವದ ಬಿರುದಾಗಿ ಖಡ್ಗ ಪಡೆದುಕೊಂಡನೆಂಬ ಪವಾಡವಿದೆ. ವೈರಿಗಳನ್ನು ತನ್ನ ನಡತೆಯಿಂದ ಸ್ನೇಹಿತನನ್ನಾಗಿಸಿಕೊಂಡನು. ನಿಜಾಮನು ನೀಡಿದ ಉಡುಗೊರೆಯಲ್ಲಿ ಒಂದು ಖಡ್ಗ ಹಾಗೂ ತಾಮ್ರಪತ್ರವಿದ್ದು ತೆರಿಗೆಯ ನೀತಿ ಇಡೀ ಭಾರತದ ತುಂಬಾ ಒಂದೇ ಯಾಗಿರಿಸಲು ದಿಲ್ಲಿಯ ಬಾದಶಹ ಗುಲಾಮ ಖಾನನಿಗೆ ಶಿಫಾರಷು ಪತ್ರ ನೀಡಿ ಭೇಟಿಯಾಗುವಂತೆ ಸಲಹೆಯನ್ನು ನೀಡಿದನು. ಸೇವಾಲಾಲ ದಿಲ್ಲಿಯ ಬಾದಶಹಾನಿಗೆ ಭೇಟಿಯಾಗಲು ನಿಜಾಮನ ಶಿಫಾರಸಿಗೆ ಮನ್ನಣೆನೀಡದ ಕಾರಣ ಸೇವಾಲಾಲನು ಯುದ್ದದ ಘೋಷಣೆಮಾಡಿ ಗುಲಾಮ ಖಾನ ನೊಂದಿಗೆ ಕೇವಲ ೯೦೦ ಸಾಮಾನ್ಯ ಸೇವಕರಿಂದ ಗುಲಾಮ ಖಾನನ ೨೫೦೦೦ ಸೈನಿಕರನ್ನು ಮಣ್ಣುಮುಕ್ಕಿಸಿದ ಘಟನೆಯನ್ನು ಯಾರೂ ಇತಿಹಾಸಕಾರರು ಬೆಳಕಿಗೆ ತರದಿರುವುದು ಖೇದನಿಯವಾಗಿದೆ. ಮಹಾರಾಷ್ಟ್ರ ಸರಕಾರವು ೧೫ ಫೆಬ್ರುವರಿ ೨೦೧೮ ರಿಂದ ಪ್ರತಿ ಸರಕಾರಿ ಕಾರ್ಯಾಲಯ, ಶಾಲಾ ಕಾಲೇಜುಗಳಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿಯನ್ನು ಆಚರಣೆ ಮಾಡಲು ಮಾನ್ಯತೆ ನೀಡಿರುತ್ತದೆ ಇದು ಅವರ ಕಾರ್ಯದ ಗೌರವ ಹಾಗೂ ಭಾರತೀಯ ಲಂಬಾಣಿ ಸಮುದಾಯದ ಹೆಮ್ಮೆಯ ಸಂಗತಿಯಾಗಿದೆ. ಈ ಮೊದಲು ಕರ್ನಾಟಕ ಹಾಗೂ ತೆಲಂಗಣ ರಾಜ್ಯಗಳಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಆಚರಿಸಲಾಗುತ್ತದೆ. ಕೇವಲ ಜಯಂತಿ ಆಚರಣೆ ಮಾಡುವುದೇ ಮುಖ್ಯ ಉದ್ದೇಶವಿಲ್ಲ ಆದರೆ ಅವರು ಮಾಡಿರುವ ಸಮಾಜೋಪಯೋಗಿ ಕಾರ್ಯದ ಪರಿಚಯ ವರ್ತಮಾನದ ಯುವಶಕ್ತಿಗೆ ಮಾಡಿಕೊಡುವುದಾಗಿದೆ. 

                       ಸಂತ ಸೇವಾಲಾಲ ಮಹಾರಾಜರು ಸಮಾಜದ ಏಳಿಗೆಗಾಗಿ, ಏಕತೆಗಾಗಿ, ಆರ್ಥಿಕವಾಗಿ ಸಮೃಧ್ಧಗೊಳಿಸಲು ಸಂಘಟಿತರಾಗಿದ್ದು ರಾಜ್ಯಾಡಾಳಿತದಲ್ಲಿ ಸಹಭಾಗಿಯಾಗುವಂತೆ ಕರೆನೀಡಿದರು. ಅವರು ಸುಮಾರು ೨೮೦ ವರ್ಷಗಳ ಮೊದಲು ಹೇಳಿರುವ ಕೆಲವು ನೀತಿ ಸಂದೇಶಗಳು ಇಂದು ಸಂಪೂರ್ಣ ಸತ್ಯವಾಗಿ ಪರಿಣಮಿಸಿವೆ.       

Read More: ಧರ್ಮದ ದಾರ್ಶನಿಕ ಯುವ ಶಕ್ತಿ ಸ್ವಾಮಿ ವಿವೇಕಾನಂದ

 ಸಂತ ಶ್ರೀ ಸೇವಾಲಾಲ ಮಹಾರಾಜರ ಸಂದೇಶಗಳು 
• ಸ್ವತಾ:ರ ಒಳಕ ಸ್ವತಃ ಕರಜೋ . (ಸ್ವತಃ ತನ್ನ ಅಸ್ತಿತ್ವಕ್ಕಾಗಿ ಪ್ರಯತ್ನಿಸಿ) 
• ರಪಿಯಾನ ಕಟೋರಾ ಪಾಣಿ ವಕಿಯ (ರೂಪಾಯಿಗೆ ಒಂದು ಲೋಟ ನೀರು ಮಾರಾಟವಾಗುತ್ತದೆ.) 
• ರಪಿಯಾನ ೧೩ ಚಣಾ ವಕಿಯ (ರೂಪಾಯಿಗೆ ೧೩ ಕಡಲೆ ಕಾಳು ಮಾರಾಟವಾಗುತ್ತವೆ.) 
• ಮಲಕೆರ ಖಬರ ಪರಮಲಕೆನ ಜಾಯ. (ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರಭಸವಾಗಿ ಸುದ್ಧಿ ಮುಟ್ಟುವುದು.- ಉದಾ.ಫೋನು ಅಥವಾ ತತ್ಸಮಾನ ತಂತ್ರಜ್ಞ್ಯಾನ) 
• ಕೋಯಿ ಮೋಟೋ ಛೆನಿ, ಕೋಯಿ ಛೋಟೋ ಛೆನಿ. (ಎಲ್ಲರೂ ಸಮಾನರು ಯಾರು ದೊಡ್ಡವರಲ್ಲ ಯಾರು ಸಣ್ಣವರಲ್ಲ) 
• ಸೊನೇರ ಸಿಂಗ ವೇಜಾಯ (ಸಿಂಗ ಅಂದರೆ ದನ ಕರುಗಳ ಕೊಂಬು. ಕೊಂಬುಗಳಿಗೆ ಬಂಗಾರದ ಬೆಲೆ ಬರುವುದು ಇದರ ಅರ್ಥ ಜಾನುವಾರುಗಳಿಗೆ ಬೆಲೆ ಹೆಚ್ಚಾಗುವುದು) 
• ಕಸಾಯಿನ ಗೋವರ್ಧನ ಮತ ವೆಚೋ. (ಕಟುಕರಿಗೆ ಆಕಳಾದಿ ಪ್ರಾಣಿಗಳನ್ನು ಮಾರಬೇಡಿ) 
• ಜೀವತೆ ಧಣಿರ ಬೀರ ಘರೇಮ ಮತ ಲಾವಜೋ. (ಗಂಡುಳ್ಳಾ ಗರತಿ ಹೆಣ್ಣು ಮಕ್ಕಳನ್ನು ಮನೆಗೆ ತರಬೇಡಿ ಅಂದ್ರೆ ಪರಸ್ತ್ರೀ ಸಹವಾಸ, ಅನ್ಯಾಯ ಅತ್ಯಾಚಾರಗಳನ್ನು ಮಾಡಬೇಡಿ.) 
• ಚೋರಿ ಲಬಾಡಿರೋ ಧನ ಘರೇಮ ಮತ ಲಾವಜೋ. (ಕಳ್ಳತನದಿಂದ, ಸುಳ್ಳು ಮೋಸದಿಂದ ಗಳಿಸಿದ ಸಂಪತು ಮನೆಗೆ ಮಾರಕವಿದ್ದು ಅದನ್ನು ಮನೆಗೆ ತರಬೇಡಿ ತಮ್ಮ ಸಂಸಾರದಲ್ಲಿ ಅದನ್ನು ವಿನಿಯೋಗಿಸಬೇಡಿ.) 
• ಕೇರಿ ನಿಂದಾ, ಚಾಡಿ ಚುಗಲಿ ಮತ ಕರಜೋ. (ಲೋಕದ ಡೊಂಕು ನೀವೇಕೆ ತಿದ್ದುವಿರಿ ಎಂಬ ಬಸವಣ್ಣನವರ ವಚನದಂತೆ ಇನೋಬ್ಬರ ನಿಂದನೆಯನ್ನು ಮಾಡುವ ಕೆಟ್ಟ ಗುಣಗಳನ್ನು ಇಟ್ಟುಕೊಳ್ಳಬೇಡಿ ಎಂದು ಬೋಧಿಸಿದರು) 
• ಕರಿಯ ಚೋರಿ, ಖಾಯೇ ಕೋರಿ. ಘರೆಮುಂಡಾಗ ಏಕಜ ಮೋರಿ. ಹಾತೆಮಾಯಿ ಆಯ ಹತಕಡಿ, ಪಗೇಮ ರೀಯ ಬೇಡಿ. ಡೋರಿ ಡೋರಿ ಹಿಂಡಿಯ ರೇ ಬಗಲಾ ಕೋಟ ಮರಿಯಮ್ಮ (ಕಳ್ಳತನ ಮಾಡಿದರೆ ಕೈಗೆ ಬೇಡಿ ತೊಡಿಸಿಕೊಂಡು ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡುತ ಮಾನ ಹರಾಜುಗೊಳಿಸಲಾಗುವುದು.) 
• ಗೋರ ಗರಿಬೇನ ದಾಂಡನ ಖಾಯೇ ವೋರ ಸಾತ ಪೀಡಿ ನರಕೆಮ ಜಾಯೇ. (ಬಡವರನ್ನು ಸುಲಿದು ತಿನ್ನುವವರ ಏಳು ಪಿಳಿಗೆಗಳು ನರಕದಲ್ಲಿ ಹೋಗುತ್ತವೆ.) 
• ಗಾವಡಿ ಬಳದೆ ಪರ ಘಣೋ ಸಂಕಟ ಆಯ ಜೆರೆ ಕಾರಣ ವನುರ ಹಡಕಾ ರ ಢೇರ ಲಾಗಜಾಯೇ ಅನ ಮಾರ ಗೋರ ಬಂಜಾರಾ ದೂರ ದೂರತಾಣು ಪಸರ ಜಾಯೇ. ಅಗರ ಮಾರ ವಚನ ಖೋಟೆ ವೆಜಾಯೇ ತೋ ಚಾಂದಾ ಸುರ್ಯಾ ನರಕೆಮ ಡುಬ ಜಾಯೇ. (ಗೋವುಗಳ ಮೇಲೆ ಸಂಕಟಗಳು ಬರುತ್ತವೆ. ನನ್ನ ಬಂಜಾರಾ ಸಮಾಜದ ಜನ ದೂರ ದೂರದ ವರೆಗೆ ವಿಕಾಸ ಹೊಂದುತ್ತಾರೆ. ತನ್ನ ನುಡಿ ಹುಸಿಯಾದರೆ ಚಂದ್ರ ಸೂರ್ಯರೂ ನರಕದಲಿ ಹೋಗುವರು. ಪ್ರಳಯವಾಗುವುದು.) 
                         ಎಂದು ಸಂತ ಶ್ರೀ ಸೇವಾಲಾಲ ಮಹಾರಾಜರು ಆಗಾಗ ನುಡಿದ ಮಾತುಗಳು ಭವಿಷ್ಯದ ನುಡಿಯಾಗಿರುವಂತೆಯೇ ಇಂದಿಗೆ ಇವುಗಳಲ್ಲಿ ಶೇ. 90 ರಷ್ಟು ಸತ್ಯವಾಗಿವೆ. ಹೀಗೆ ತಮ್ಮ ಸಾಮಾನ್ಯತನದಿಂದ ಅಸಾಮಾನ್ಯವಾಗಿ ಸಾಮಾಜಿಕ ಸಂವರ್ಧನೆಯ ಕೆಲಸ ಮಾಡಿರುವ ಸೇವಾಲಾಲರು ಲಂಬಾಣಿ ಸಮುದಾಯದ ಕಣ್ಮಣಿಯಾಗಿದ್ದಾರೆ. ಅವರಿಗೆ ಮಹಿಳೆಯರೆಲ್ಲ ಭಾಯಾ ಎಂದು ಕರೆಯುತ್ತಿದ್ದರು. ಭಾಯಾ ಎಂದರೆ ಅಣ್ಣ ಎಂದರ್ಥ. ಎಲ್ಲರೂ ತನಗೆ ಸಹೋದರಿಯರು ಎಂದು ತಿಳಿದು ಸಂಸಾರಿಯಾಗದೇ ಎಲ್ಲ ಬಂಧುಗಳ ಜೊತೆಗೆ ಸ್ನೇಹತ್ವ ಹೊಂದಿ ದಾರ್ಶನಿಕನಾಗಿ, ಸೇನಾನಿಯಾಗಿ , ಪ್ರಭೋಧನಕಾರರಾಗಿ, ಆಯುರ್ವೇದಾಚಾರ್ಯ - ನಾಗಿಯೂ ರೋಗಿಗಳ ಸೇವೆ ಮಾಡಿರುವ ಸೇವಾಲಾಲರು ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆಯಲ್ಲಿಯ ಪೋಹರಾಗಡ ಎಂಬಲ್ಲಿ ತಾಯಿ ಜಗದಂಬೆಯ ಸೇವೆ ಮಾಡುತ್ತ ತನ್ನ ಸಮಾಜ ಬಾಂಧವರ ಹಿತವನ್ನು ಜಪಿಸುತ್ತ ತನ್ನ ಆಯುಷ್ಯದ ೩೪ನೆಯ ವರ್ಷದಲ್ಲಿ ೨ ಜನೆವರಿ ೧೭೭೩ ರಲ್ಲಿ ಸಮಾಧಿಸ್ಥರಾದರು ಎಂದು ಹೇಳಲಾಗುತ್ತದೆ. ಈಗಲೂ ಪ್ರತಿವರುಷ ಪೋಹರಾದೇವಿ ಯಾತ್ರೆ ವಿಜ್ರಂಭಣೆಯಿಂದ ಜರುಗುತ್ತದೆ. ಸೇವಲಾಲ ಮಹಾರಾಜ ಹಾಗೂ ತಾಯಿ ಜಗದಂಬೆಯ ಆಶೀರ್ವಾದ ಪಡೆಯಲು ಭಾರತದ ಮೂಲೆ ಮೂಲೆಗಳಿಂದ ಸಮಾಜ ಬಾಂಧವರು ತಮ್ಮ ದೇವರನ್ನು ಕಣ್ಣಿರಿನ ಅಭಿಷೇಕ ಮಾಡಿ ಪುನಿತರಾಗುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು