ಮುದ್ದು ವಿದ್ಯಾರ್ಥಿಗಳೇ, ನಿಮಗೆಲ್ಲರಿಗೂ ಗುಬ್ಬಚ್ಚಿಗಳ ಚಿಲಿಪಿಲಿ ಬ್ಲಾಗಿಗೆ ಹಾರ್ದಿಕ ಸ್ವಾಗತ! ಸುಸ್ವಾಗತ!!

ರಾಜಕಾರಣ = Politics (Village Story)

 

ರಾಜಕಾರಣ


ರಾಜ್ಯದಲ್ಲಿ ಗ್ರಾಮ ಪಂಚಾಯತ ಚುನಾವಣೆ ಘೋಷಿಸಲಾಗಿತ್ತು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಆಯಾ ಪಕ್ಷಗಳು ತಮ್ಮ ತಮ್ಮ  ಮತಗಳನ್ನು ಗಟ್ಟಿಗೊಳಿಸುವುದರಲ್ಲಿ ಮಗ್ನವಾಗಿದ್ದವು. ಊರ ನಾಯಕರಿಗೆ ತಮ್ಮ ಪ್ಯಾನೆಲ್ಲಿನಲ್ಲಿ ಯಾವ ಯಾವ ಮನೆತನದ ಯಾವ ಯಾವ ವ್ಯಕ್ತಿ ಇದ್ದರೆ ವೊಟ್ ಬ್ಯಾಂಕ ತನ್ನದಾಗುತ್ತದೆ ಎಂಬ ಚಿಂತೆಯಲ್ಲಿ ರಾತ್ರಿ ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಹಾಲಿ ಅಧ್ಯಕ್ಷ ವಿರಪ್ಪನು ತನ್ನ ಜೊತೆಯಲ್ಲಿ ಯಾರನ್ನು ತೆಗೆದುಕೊಂಡರೆ ಪ್ಯಾನೆಲಕ್ಕೆ ಬಲ ಬಂದಿತ್ತು ಎಂದು ಚಿಂತಿಸುತ್ತ ವಾರ್ಡಿನಲ್ಲಿಯ ಎಲ್ಲ ಮುಖಂಡರ ಹೆಸರುಗಳನ್ನು ಮೆಲುಕು ಹಾಕಿ ನೋಡಿದರು. ಆದರೆ ಯಾರೂ ಅವನಿಗೆ ತಕ್ಕ ಅರ್ಹ ಅಭ್ಯರ್ಥಿ ಹೊಳೆಯಲಿಲ್ಲ. ಒಂದು ಹೆಸರು ಮಾತ್ರ ಅವನ ಮನಸ್ಸಿನಲ್ಲಿ ಬಂದು ಢೋಲು ಬಾರಿಸಿದಂತೆ ಅಪ್ಪಳಿಸಿತು. ಅವಿನಾಶ!

                ಅವಿನಾಶ ಕಳೆದ ಬಾರಿಗೆ ತನ್ನನ್ನು ಆರಿಸಿ ತರಲು ಬಹಳಷ್ಟು ಪ್ರಯತ್ನ ಪಟ್ಟಿದನು. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದ್ದಿದಲ್ಲದೆ ಕೊನೆಗೆ ಪುಣೆಯಿಂದ ವಲಸಿಗರಾಗಿ ಹೋಗಿರುವ ಮತದಾರರನ್ನು ಕರೆತರುವುದಕ್ಕಾಗಿ ತನ್ನ ಹೊಲ ಅಡುವಿಟ್ಟು ಐವತ್ತು ಮತಗಳನ್ನು ಕರೆತಂದು ತನ್ನ ಗೆಲುವಿಗೆ ಕಾರಣನಾಗಿದ್ದನು. ಆಗ ತಾನೆ ಅಲ್ಲವೇ ಅವನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಮಾತು ಕೊಟ್ಟಿದ್ದು? ಹಾಗಾದರೆ ಮತ್ತೇಕೆ ಬೇರೆಯವರ ವಿಚಾರ ಮಾಡುತ್ತಿದ್ದೇನೆ? ಫೊನ ಮಾಡಿ ಅವನನ್ನು ಕರೆಸಬೇಕು. ಅವನು ನನ್ನ ಪ್ಯಾನೆಲ್ ನಲ್ಲಿ ಇದ್ದರೆ ಮಾತ್ರ ನನಗೆ ಮತ್ತು ನನ್ನ ಪ್ಯಾನೆಲ್ಗೆ ಆನೆ ಬಲ ಬರುವುದು ಎಂದು ಅವನನ್ನು ತೆಗೆದುಕೊಂಡೇ ಹೊಸದಾಗಿ ಪ್ಯಾನೆಲ ಕಟ್ಟಬೇಕು ಎಂದು ವಿಚಾರ ಮಾಡಿದನು.

                ಅವಿನಾಶನ ಹೆಸರು ಹೊಳೆದದ್ದೆ ತಡ ಕಳೆದೆರಡು ವರ್ಷಗಳಲ್ಲಿ ನಡೆದ ಪ್ರಸಂಗಗಳೆಲ್ಲ ಅವನ ಕಣ್ಣು ಮುಂದೆ ಬಂದು ನಿಂತವು. ಮುಂಬಯಿಯಲಿ ಡ್ರಾಯಿವಿಂಗ ಮಾಡುತ್ತಿದ್ದ ಅವಿನಾಶ ಇದ್ದಕ್ಕಿದ್ದಂತೆ ಊರಿಗೆ ಮರಳಿ ಬಂದಿದ್ದನು. ಹಳ್ಳಿಯಲ್ಲಿ ಬೇಸಾಯ ಮಾಡುತ್ತೇನೆ ಎಂದು ಹೆಂಡತಿ ಅಂಬಿಕಾಳನ್ನು ನಂಬಿಸಿ ಯಾವುದೋ ಫಿಲ್ಮಸಿಟಿ ಕಂಪನಿಯಲ್ಲಿ ತಿಂಗಳಿಗೆ ಹದಿನಾರು ಸಾವಿರ ರೂಪಾಯಿ ಸಂಬಳದ ನೌಕರಿಯನ್ನು ಬಿಡಿಸಿ ಹಳ್ಳಿಗೆ ಕರೆತಂದಿದ್ದನು. ಪಾಪ ಅವಳಿಗೆ ಹೊಲ ಗದ್ದೆಗಳ ಕೆಲಸ ಬಾರದೆ ಬಟ್ಟೆ ಹೊಲೆಯುವ ಕೆಲಸ ಮಾಡತೊಡಗಿದ್ದಳು. ಹೊಲದಲ್ಲಿ ನೀರಾಯಿತು. ಕಬ್ಬು ಬಾಳೆ ಎರಡು ವ಼ರ್ಷ ಚೆನ್ನಾಗಿ ಕೃಷಿ ಮಾಡಿದನು. ಕೈಯಲ್ಲಿ ಹಣ ಒಡಾಡತೊಡಗಿತ್ತು. ಅಂಬಿಕಾಳಿಗೂ ಸಂತೋಷವಾಯಿತು. ಡ್ರಾಯವರ ಕೆಲಸದಲ್ಲಿ ಗಂಡ ಮನೆ ಬಿಟ್ಟು ಹೋದರೆ ಎರಡು-ಮೂರು ದಿನಗಳು ಹೊರಗೆ ಇರುತ್ತಿದ್ದನು. ಅಲ್ಲದೆ ಮತ್ತೆ ಮನೆಗೆ ಮರಳಿ ಬರುವವರೆಗೆ ಮನಸ್ಸಿಗೆ ನೆಮ್ಮದಿ ಇರುತ್ತಿರಲಿಲ್ಲ. ಈಗ ಕಣ್ಣಿನೆದುರಿಗೆ ಹಗಲು-ರಾತ್ರಿ ಇದ್ದುದರಿಂದ ಮನಸ್ಸಿಗೆ ಯಾವುದೇ ಆತಂಕವಿರುತ್ತಿರಲಿಲ್ಲ. ತಾನೂ ತೋಟಕ್ಕೆ ಹೋಗಿ ಕೈಗೆಟುಕುವ ಕೆಲಸ ಮಾಡುತ್ತಿದ್ದಳು. ಆದರೆ ದಿನ ಕಳೆದಂತೆ ಅವಿನಾಶನಿಗೆ ಕೆಟ್ಟ ಸ್ನೇಹಿತರ ಸಹವಾಸವಾಗತೊಡಗಿತು. ಬಾರದ ಚಟಗಳು ಮಾಡತೊಡಗಿದ್ದನು. ಅಂತಹದರಲ್ಲಿ ಬೋರವೆಲ್ ನೀರು ನಿಂತು ಹೋಯಿತು. ಕಬ್ಬು ಬಾಳೆ ಒಣಗಿ ಹೋದವು. ಟೆನ್ಶನ ಹೆಚ್ಚಾಗಿ ಕುಡಿಯುವುದನ್ನು ಹೆಚ್ಚಿಸಿದನು. ಕುಡಿದು ರಾತ್ರ‍್ರಿ ಮನೆಗೆ ಬಂದು ಹೆಂಡತಿ ಜೊತೆಗೆ ಜಗಳಾಡತೊಡಗಿದ್ದನು. ಅಂಬಿಕಾ ಬದಲಾವಣೆಯಾದ ಗಂಡನ ವರ್ತನೆ ಕಂಡು ಗಾಬರಿಗೊಂಡಳು. ಪಿಯುಸಿ ವರೆಗೆ ಓದಿದವಳಾದ ಅವಳು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಮನೆ ಸಂಸಾರಕ್ಕೆ ಕೈ ಹಚ್ಚುತ್ತಿದ್ದಳು. ಗಂಡನ ಚಾಡಿ ತವರಿಗೆ ಮಾಡುವಂತಿಲ್ಲ. ಗಂಡನ ಮರ್ಯದೆ ತೆಗೆಯಲು ಮನಸ್ಸು ಬಾರದೆ ಬಾಯಿ ಮುಚ್ಚಿ ಎಲ್ಲವನ್ನು ಸಹಿಸಿದಳು. ಹೆಂಡ-ಹೆಣ್ಣು ಇವುಗಳ ಸಹವಾಸ ಮನುಷ್ಯನನ್ನು ಸತ್ಯಾನಾಶ ಮಾಡುತ್ತದೆ. ಬರಬರುತ್ತ ಅವಿನಾಶನ ಹಣಕ್ಕೆ ಆಶೆಪಟ್ಟ ಸೂಳೆಕೆರೆಗೂ ಹೋಗುತ್ತಾನೆ ಎಂಬುದೂ ಅಂಬಿಕಾಳಿಗೆ ತಿಳಿಯತೊಡಗಿತು. ರಾತ್ರಿ ಬಂದು ಊಟಕ್ಕೆ ಕುಳಿತರೆ ತನ್ನ ಹಾದರ ಬಿಚ್ಚಬಾರದೆಂದು ಅವಿನಾಶ ಹೆಂಡತಿಯ ಮೇಲೆಯೇ ಇಲ್ಲ ಸಲ್ಲದ ಆರೋಪ ಮಾಡತೊಡಗಿದ್ದನು. ಅವಳ ಚಾರಿತ್ರ್ಯದ ಮೇಲೆ ಸಂಶಯ ಪಡತೊಗಿದ್ದನು. ನಾನು ಮನೆಯಲ್ಲಿ ಇಲ್ಲದಿರುವಾಗ ಯಾರನ್ನು ಮನೆಗೆ ಕರೆದು ಚಕ್ಕಂದ ಆಡುತ್ತಿರುತ್ತಿ? ಎಂದು ಕೈಗೆ ಬಂದ ವಸ್ತುಗಳಿಂದ ಹೊಡೆಯತೊಡಗಿದ್ದನು. ದಿನಾಲೂ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದರೂ ಗಂಡನ ಮರ್ಯಾದೆ ತೆಗೆಯಬಾರದೆಂದು ಎಲ್ಲವನ್ನೂ ಸಹಿಸಿಕೊಂಡವಳಿಗೆ ಇಂದು ತನ್ನ ಚಾರಿತ್ರ್ಯದ ಮೇಲೆ ಅಪವಾದ ಮಾಡಿದ್ದು ತುಂಬಾ ಮನಸ್ಸಿಗೆ ಹತ್ತಿಕೊಂಡಿತ್ತು. ಅವಳಿಗೆ ಅವಿನಾಶನನ್ನು ಕಂಡರೆ ಅಸಹ್ಯವಾಗತೊಡಗಿತು. ತಾನು ಈ ಮನೆಯಲ್ಲಿ ಸತ್ತರೂ ಇರಬಾರದೆಂದು ನಿರ್ಧಾರ ಮಾಡಿದಳು. ತಂದೆ-ತಾಯಿಗಳಿಗೆ ಫೊನ ಮಾಡಿ ಕರೆಸಿದಳು.

                ಮರುದಿವಸ ತಂದೆ, ತಾಯಿ ಅಣ್ಣ-ತಮ್ಮಂದಿರು ಊರಿನ ನಾಲ್ಕು ಪಂಚರನ್ನು ಕರೆದುಕೊಂಡು ಸಣ್ಣೂರಿಗೆ ಮಗಳ ಮನೆಗೆ ಹಜರಾದರು. ಊರಿನ ನಾಲ್ಕು ಜನರನ್ನು ಕರೆಸಿ, ಅವಿನಾಶನ ಸಂಬಂಧಿಕರನ್ನು ಕರೆಸಿದಾಗ ಸಂಬಂಧಿಕರೊಬ್ಬರೂ ಬರಲಿಲ್ಲ. ವಿರಪ್ಪ ಸೇರಿದಂತೆ ಎಲ್ಲ ಗಣ್ಯ ವ್ಯಕ್ತಿಗಳು ಯಾಕೆ ನಿನ್ನ ಹೆಂಡತಿಯನ್ನು ಹೊಡೆಯುತ್ತಿ ಎಂದು ಕೇಳಿದಾಗ, ‘ನಾನು ಬೇಕಂತೇನು ಅವಳನ್ನು ಹೊಡೆಯುವುದಿಲ್ಲ. ಅವಳು ಬೇಕೆಂದೇ ಜಗಳಕ್ಕಿಳಿಯುತ್ತಾಳೆ. ಅಲ್ಲದೆ...

                ಅಲ್ಲದೆ ಏನು?’ ವಿರಪ್ಪ ಕೇಳಿದರು.

                ಅದನ್ನು ನಾನು ನನ್ನ ಬಾಯಿಯಿಂದ ಹೇಳುವುದಿಲ್ಲ. ನನ್ನ ಮಾನ ಹರಾಜಿಗಿಟ್ಟಿದ್ದಾಳೆ. ಯಾವನನ್ನೋ ಕಟ್ಟಿಕಂಡು ನನ್ನ ಮೋಸ ಮಾಡುತ್ತಿದ್ದಾಳೆ.ಅವಿನಾಶ ಸ್ಪಷ್ಟಿಕರಣೆ ನೀಡಿದನು.

                ದೇವತೆಯ ಹಾಗೆ ಇರುವ ಅಂಬಿಕಾಳ ಸ್ವಭಾವ ಸುತ್ತ ಮುತ್ತಲಿನ  ಮನೆಯವರೆಲ್ಲರಿಗೂ ಚೆನ್ನಾಗಿ ಗೊತ್ತಿತ್ತು. ಅವಿನಾಶನ ಮಾತು ಕೇಳಿ ಸುತ್ತಲಿನ ಮಹಿಳೆಯರೆಲ್ಲ ಬಾಯಿಗೆ ಬೆರಳಿಟ್ಟರು. ನಿನ್ನ ನಾಲಿಗೆ ಸೀಳಿ ಹೊಗುತ್ತೆ ಮುಂಡೆ ಮಗನೆಎಂದು ಶಪಿಸಿದರು.

                ಅಂಬಿಕಾ ಧೈರ್ಯವಾಗಿ ನುಡಿದಳು, ‘ನೋಡಿ, ತಾನೇ ಯಾವಳೊಂದಿಗೋ ರಾತ್ರಿ ಅಪರಾತ್ರಿ ಇದ್ದು ಬಿದ್ದು ರ‍್ತಾನೆ, ಕುಡಿದೂ ಬಂದು ಹೊಡಿ ಬಡಿ ಮಾಡುತ್ತಾನೆ. ಮೇಲಿಂದ ನನ್ನ  ಮೇಲೆಯೇ ಅಪವಾದ ಹೊರೆಸ್ತಿದ್ದಾನೆ. ನಾನು ಯಾರೊಂದಿಗಿ ಕೂಡಿಕೊಂಡಿದ್ದೇನೆ ಎಂಬುದನ್ನು ತೊರಿಸಿ ಕೊಡಬೇಕು. ನನಗೆ ಒಂದು ದಿಕ್ಕು ತೊರಿಸಿ ಕೊಡಬೇಕು.ಇರಲಿ, ಇರಲಿ ಅಂತ ತುಂಬ ಸಹಿಸಕೊಂಡೆ. ಒಂದೇ ಒಂದು ಮಗು, ಚೆನ್ನಾಗಿ ಶಿಕ್ಷಣ ಕೊಡಿಸಬೇಕು. ಸಿಟಿಯಲ್ಲಿ ಇದ್ದು ಒಳ್ಳೆಯ ಶಾಲೆಯಲ್ಲಿ ಹಾಕಬೇಕು ಅಂತ ಮಾಡಿದೆ. ಆದರೆ ಹೊಲ-ತೋಟ ಮಾಡ್ತಿನಂತ ಈ ಒಡಕ ಹಳ್ಳಿಲಿ ತಂದು ಈ ರೀತಿ ತ್ರಾಸು ಕೊಡ್ತಿದ್ದಾನೆ. ನಾ ಒಂದ ಕ್ಷಣ ಕೂಡ ಇವನೊಂದಿಗೆ ಬಾಳುವುದಿಲ್ಲ.ಎಂದು ಬಿಕ್ಕಿ ಬಿಕ್ಕಿ ಅಳಹತ್ತಿದ್ದಳು.

                ಹೋಗುವವಳಿದ್ದರೆ ಹೋಗಲಿ, ಆದರೆ ನೆನಪಿರಲಿ, ನಾನು ಮನೆ ಬಿಟ್ಟು ಕಳುಹಿಸುತ್ತಿಲ್ಲ, ಅವಳಾಗಿ ಹೋಗುತ್ತಿದ್ದಾಳೆ. ಅವಳಾಗಿ ಬಂದರೆ ಸರಿ ಇಲ್ಲವಾದರೆ ಅವಳು ಅಲ್ಲೇ ಇರಬೇಕು, ನಾನು ಇಲ್ಲೇ ಇರಬೇಕುಎಂದು ಅವಿನಾಶ ಕೂಗಾಡಿದನು. ಅವ್ವ-ಅಪ್ಪ ತಮ್ಮ ಮಗಳಿಗೆ ಬಂದ ದುಸ್ಥಿತಿಗೆ ಮರಗುತ್ತ ಕಣ್ಣಿರಿಡುತ್ತ ಅವಳನ್ನು ತವರಿಗೆ ಕರೆದುಕೊಂಡು ಹೋದರು. ಎರಡು ವರುಷಗಳಲ್ಲಿ ಒಮ್ಮೆಯೂ ಮಗನ್ನನ್ನಾಗಲಿ, ಹೆಂಡಿತಿಯನ್ನಾಗಲಿ ಬಂದು ನೋಡಲಿಲ್ಲ, ಬದುಕಿದ್ದಿರೋ ಇಲ್ಲ ಸತ್ತು ಹೋಗಿದ್ದಿರಿ ಎಂದು ಕೇಳಲಿಲ್ಲ. ಮಾತ್ರ ಊರಿನ ಇತರ ಜನರಲ್ಲಿ ಮಾತ್ರ ನನ್ನ ಮಗ ಹೇಗಿದ್ದಾನೆ? ಎಂದು ನೋಡಿಕೊಂಡು ಬರಲು ಹಾಗೂ ಅವನು ಹೊರಗೆ ಎಲ್ಲಿಯಾದರೂ ಆಟ ಆಡುತ್ತಿದ್ದರೆ ಅವನೊಂದಿಗೆ ಫೊನಿನಲ್ಲಿ ಮಾತಾಡಿಸಲು ಕೇಳಿಕೊಳ್ಳುತ್ತಿದ್ದನು. ಹೀಗೆ ಒಂದೆರಡು ಸಲ ಮನೆಗೆ ಬಂದು ಮಗನೊಂದಿಗೆ ಸಲುಗೆ ತೋರಿ ಅಪ್ಪನೊಂದಿಗೆ ಮಾತನಾಡುತ್ತಿರುವುದು ಅಂಬಿಕಾಳಿಗೆ ಗೊತ್ತಾಗಿ ಫೊನಿನವನೊಂದಿಗೆ ಜಗಳವೂ ಆಗಿತ್ತು. ನಿಮ್ಮಂಥವರಿಂದಲೇ ನಮ್ಮ ಮನೆ ಹಾಳಾಗಿದ್ದು. ಅವನಿಗೆ ಮಗ ಬೇಕಾದರೆ ಬಂದು ನೋಡಿಕೊಂಡು ಹೋಗಲಿ, ನೀವೇಕೆ ನಮ್ಮ ಸಂಸಾರದಲ್ಲಿ ಬೆಂಕಿ ಹಾಕಲು ನೋಡುತ್ತಿರಿ ಎಂದು ಬಂದವರ ಮೇಲೆ ಹರಿ ಹಾಯ್ದಿದ್ದಳು ಅಂಬಿಕಾ. ದಿಕ್ಕು ಇಲ್ಲದ ದೋಣಿ ಸಂಸಾರ ಸಾಗರದಲ್ಲಿ ಅಲ್ಲೊಲ ಕಲ್ಲೊಲವಾಗಿ ಹೋಗಿತ್ತು. ಮಗು ಎಂಬ ಹೋಟ್ಟು ಮಾತ್ರ ಏಕೈಕ ಆಧಾರವಾಗಿತ್ತು. ಮರು ಮದುವೆ ಮಾಡಿಕೊಳ್ಳುವವನಿದ್ದಾನೆ ಎಂದು ಬೇರೆಯವರಿಂದ ಸುದ್ದಿಗಳು ಏಳುತ್ತಿದ್ದವು. ಆಗಾಗ ಸಂಬಂಧಿಕರು ಮನೆಗೆ ಬಂದು ನಿನ್ನ ಸಂಸಾರ ಉಳಿಸಿಕೊ, ಗಂಡ ಎಷ್ಟೇ ಸೂಳಿಯರನ್ನು ಮಾಡಿದರೂ ನಡೆಯುತ್ತದೆ ಅತ್ತ ಲಕ್ಷ ಕೊಡದೆ ಮಗುವಿನತ್ತ ನೋಡಿ ಬಾಳುವೆ ಮಾಡುಎಂದು ಬುದ್ಧಿವಾದ ಹೇಳುತ್ತಿದ್ದರು. ಅವರಿಗೆ ಅಂಬಿಕಾ, ಗಂಡ ಮುಂದೆ ಹೀಗೆಯೇ ಮಾಡತೊಡಗಿದ್ದರೆ ನೀವು ಹೊಣೆಗಾರರೋ? ನಿಮಗೆ ಕರೆದುಕೊಂಡು ಬರಲು ಹೇಳಿ ಕಳುಹಿಸಿದ್ದಾನೇನು?’ ಎಂದು ಕೇಳಿದರೆ ಅವನೇಕೆ ಕಳುಹಿಸ್ತಾನೆ, ನಿನ್ನ ಬಾಳ ಕಂಡು ಮರುಗಿ ಹೇಳೊಕೆ ಬಂದೆಎಂದು ಹೇಳುತ್ತಾರೆ. ಅದಕ್ಕೆ ಅಂಬಿಕಾ, “ನನ್ನ ಕಂಡು ಮರುಕ ಪಡೋ ಅಗತ್ಯವಿಲ್ಲ. ನನ್ನ ಮಗನೊಂದಿಗೆ ಅಮ್ಮ-ಅಪ್ಪ ಇರೊವರೆಗೂ ಇಲ್ಲಿಯೇ ದುಡಿದು ನನ್ನ ಮಗನನ್ನು ಸಾಕುತ್ತೇನೆ. ಮುಂದೆ ಇನ್ನೊಬ್ಬರ ಮನೆ ಕಸ ಮುಸುರೆ ಮಾಡಿ ಬದುಕಿಕೊಳ್ಳುತ್ತೇನೆ. ಗಂಡನಿಗೆ ಬೇಕಾಗಿಲ್ಲದ ನಾನು ನಿಮ್ಮ ಮಾತು ಕೇಳಿ ಯಾರ ಮನೆಗಂತ ಬರಲಿ. ಅವನು ಕರೆಯಲು ಬಂದು ಮತ್ತೇ ಹೀಗೆ ಮಾಡುವುದಿಲ್ಲ. ನಡೆ ಮನೆಗೆ ಎಂದು ಹೇಳಿದರೆ ಖಂಡಿತವಾಗಿ ಹೋಗುವೆಎನ್ನುತ್ತಿದ್ದಳು. ಬಂದವರು ತೆಪ್ಪಗಾಗಿ ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿ ಹೋಗುತ್ತಿದ್ದರು.

शैक्षणिक वर्ष २०२3-२4 पासून इयत्ता 2 री ते इयत्ता 8 वी च्या पाठ्यपुस्तकाांमध्ये वह्यांची पाने समाणवष्ट करण्याबाबत. G. R.

                ಈ ಎರಡು ವರ್ಷಗಳಲ್ಲಿ ಅವಿನಾಶ ಮಾಡಿದ ಸಾಲವೂ ಹೆಚ್ಚಾಗಿತ್ತು. ಬಡ್ಡಿ ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ಹೊಲದಲ್ಲಿ ಏನೂ ಬೆಳೆದಿರಲಿಲ್ಲ. ಇನ್ನೊಬ್ಬರಿಗೆ ಬಡ್ಡಿಯಲ್ಲಿ ಹೊಲ ಸಾಗುವಳಿಗೆ ಕೊಟ್ಟು ತನ್ನ ಮೊದಲಿನ ಕಾಯಕ ವಾಹನ ನಡೆಸಲು ಮುಂಬಯಿಗೆ ಹೋಗಿ ಬಿಟ್ಟಿದನು. ಡ್ರಾಯವರ ಎಂದ ಮೇಲೆ ಊಟ ಸಿಕ್ಕಲಿ ತಿಂದು ಜಾಗ ಸಿಕ್ಕಲಿ ಮಲಗಿಕೊಳ್ಳುವುದು, ಇಲ್ಲವೇ ಹಗಲು ರಾತ್ರಿ ಮೋಟಾರಿನಲ್ಲೇ ದಿನಗಳು ಕಳೆದು ಹೋಗುತ್ತಿದ್ದವು. ನೇಪಕ್ಕೆಂದು ಸ್ನಾನಕ್ಕೆ ತನ್ನ ಅಣ್ಣ ರಾಜೀವನ ಮನೆಗೆ ಹೋಗುತ್ತಿದ್ದನು. ಅವರೂ ಮೊದ ಮೊದಲು ಹೆಂಡಿತಿಯನ್ನು ಕರೆದುಕೊಂಡು ಬಾ, ಸರಿಯಾಗಿ ಸಂಸಾರ ಮಾಡುಎಂದು ಹೇಳಿ ನೋಡಿದರು. ಆದರೆ ಅದು ನನ್ನ ವ್ಯಯಕ್ತಿಕ ವಿಷಯ. ಅದರಲ್ಲಿ ನೀವು ತಲೆ ಹಾಕಬೇಡಿ ಎಂದು ಅಸಡ್ಡೆಯಿಂದ ಹೇಳಿದಾಗ ಅಣ್ಣ ಸಿಟ್ಟಿನಲ್ಲಿ, ‘ಹಾಗಾದರೆ ನನ್ನ ಮನೆಯಲ್ಲಿ ನಿನಗೆ ಜಾಗವಿಲ್ಲಎಂದು ಬೆದರಿಸಲು ಮರು ದಿನದಿಂದ ಮನೆಗೆ ಬರುವುದನ್ನೇ ಬಿಟ್ಟು ಬಿಟ್ಟನು. ರಾಜೀವನಿಗೆ ಕೆಟ್ಟದೆನಿಸಿತು. ಬೆನ್ನಿಗೆ ಹುಟ್ಟಿದ ಸಹೋದರ, ಇಂದು ಹೆಂಡತಿ ಇಲ್ಲದ ಮನೆಯಲ್ಲಿ ಹೊಟ್ಟೆಗೆ ಸಮಯಕ್ಕೆ ಸರಿಯಾಗಿ ಅನ್ನವಿಲ್ಲದೆ ತನ್ನ ತಮ್ಮ ಅಲ್ಲಲ್ಲಿ ಅಲೆಯುತ್ತಿರುವುದು ಸರಿ ಅನ್ನಿಸಲಿಲ್ಲ. ಹುಡುಕಿಕೊಂಡು ಮತ್ತೆ ಮನೆಗೆ ಬಂದು ಹೋಗುತ್ತಿರು ಎಂದು ತಾಕಿತು ಮಾಡಿದನು. ಅಲ್ಲಿಗೆ ಅವಿನಾಶನಿಗೆ ಕಾಯಮ ಸೂರು ದೊರೆಯಿತು. ಹೊಟ್ಟೆಗೂ ಅನೂಕುಲವಾಯಿತು.  ಹೆಂಡತಿಯ ಅಗತ್ಯವೇ ಇಲ್ಲದಂತೆ ಯಾವ ಜವಾಬ್ದಾರಿಗಳಿಲ್ಲದ ಎತ್ತಿನಂತೆ ಮೇವು ಸಿಕ್ಕಲಿ ತಿಂದು ಆಸರೆ ಸಿಕ್ಕಲ್ಲಿ ಮಲಗತೊಡಗಿದ್ದನು.

                ಇದೆಲ್ಲವನ್ನು ನೆನಪಿಸಿಕೊಂಡ ವಿರಪ್ಪ ಅವನನ್ನು ಊರಿಗೆ ಕರೆಯಲು ನಿರ್ಧರಿಸಿದ್ದನು. ವಾರ್ಡಿನಲ್ಲಿ ಮಹಿಳಾ ಅಭ್ಯರ್ಥಿಗೆ ಚುನಾವಣೆಗೆ ನಿಲ್ಲಿಸಬೇಕಾಗಿತ್ತು. ಅಂಬಿಕಾಳ ತಂದೆ ತಮ್ಮ ಪಕ್ಷದ ಹಿರಿಯ ಮುಖಂಡರಿದ್ದಾರೆ.ಅಲ್ಲದೆ ಎಮ್.ಎಲ್. ಎ. ಅವರ ನಂಬಿಕೆಯ ವ್ಯಕ್ತಿ. ಹಾಗಾಗಿ ಎಮ್.ಎಲ್.ಎ. ಅವರಿಂದ ಹೇಳಿಸಿ ಮಗಳಿಗೆ ಕಳುಹಿಸಿ ಕೊಡುವುದಕ್ಕೆ ಮನವೊಲಿಸಬೇಕು. ಅಂಬಿಕಾಳನ್ನು ಚುನಾವಣೆಗೆ ನಿಲ್ಲಿಸಿ ಈ ಮುಲಕವಾದರೂ ಗಂಡ- ಹೆಂಡತಿಯರನ್ನು ಒಂದೇ ಸೂರಿನಲ್ಲಿ ಬರುವಂತೆ ಮಾಡಿದರೆ ಅವರ ಸಂಸಾರವಾದರೂ ಸುರುಳಿತವಾಗಿ ಸಾಗುತ್ತದೆ ಎಂಬುದು ವಿರಪ್ಪನವರ ತರ್ಕವಾಗಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಮಾನಸಿಕ ಸಮಾಧಾನವೂ ಅವರದಾಗುತ್ತಿತ್ತು. ಈ ದಿಕ್ಕಿನಲ್ಲಿ ಪ್ರಯತ್ನ ಮಾಡತೊಡಗಿದ್ದರು. ಅವಿನಾಶನಿಗೆ ಊರಿಗೆ ಕರೆದುಕೊಂಡರು. ಮತ್ತೇ ಚುನಾವಣೆ ಬಂದಿದೆ ಕಾರ್ಯಕರ್ತರೆಲ್ಲರೂ ಊರಿಗೆ ಬನ್ನಿ, ಎಂದಕೂಡಲೇ ಕೆಲಸ ಬಿಟ್ಟು ಒಂದೇ ಕಾಲಲ್ಲಿ ನಿಂತವನಂತೆ ಊರಿಗೆ ಬಂದನು ಅವಿನಾಶ.

                ಮುಂಬಯಿಯಿಂದ ಊರಿಗೆ ಬಂದರೆ ಯಾರ ಮನೆಗೆ ಹೋಗಬೇಕು ಎಂಬುದನ್ನು ಅವಿನಾಶ ಯೋಚಿಸಿರಲಿಲ್ಲ. ನೇರವಾಗಿ ವಿರಪ್ಪನವರ ಮನೆಗೆ ಹೇಗೆ ಹೋಗುವುದು? ಊರಿನಲ್ಲಿ ದೊಡ್ಡಣ್ಣನ ಕುಟುಂಬವಿತ್ತು ಆದರೆ ಹೆಂಡತಿ ತವರಿಗೆ ಹೋದಾಗಿನಿಂದ ಅವನೆಂದೂ ಅಣ್ಣ-ಅತ್ತಿಗೆಯವರನ್ನು ಮಾತನಾಡಿಸಿರಲಿಲ್ಲ. ನ್ಯಾಯ ಕೂಡಿದಾಗ ಅಣ್ಣನ ಮಾತುಗಳಿಗೆ ಬೆಲೆ ಕೊಟ್ಟಿರಲಿಲ್ಲ. ತನ್ನ ಪರಿಸ್ಥಿತಿಯ ಬಗ್ಗೆ ಅವರಿಗೆ ಏನೊಂದು ಹೇಳಿರಲಿಲ್ಲ. ಈಗ ಅಕಸ್ಮಾತ್ತಾಗಿ ಅಣ್ಣನ ಮನೆಗೆ ಹೋಗಲು ಮನ ಹಿಂಜರಿಯುತ್ತಿತ್ತು. ಹೆಂಡತಿ ಬಿಟ್ಟವನೆಂಬ ನಾಚಿಕೆಯೂ ಕಾಡುತ್ತಿತ್ತು. ಆದರೂ ಉಪಾಯವಿಲ್ಲದೆ ಅಣ್ಣನ ಮನೆ ಬಾಗಿಲಿಗೆ ಬಂದು ಬಿಟ್ಟನು. ಮನೆಗೆ ಬಂದವನನ್ನು ಅಣ್ಣ-ಅತ್ತಿಗೆ ಹೋರಗೆ ಹಾಕಲಿಲ್ಲ. ಕಾಲು ನೋವಿನಿಂದ ಬಳಲುತ್ತಿದ್ದ ರಾಮಪ್ಪ ಮತ್ತು ಕಸ್ತೂರಿ ವಯಸ್ಸಿನ ತಕರಾರುಗಳನ್ನು ಒಬ್ಬರಿಗೊಬ್ಬರಿಗೆ ಹೇಳಿ ಸಮಾಧಾನ ಪಟ್ಟುಕೊಳ್ಳುತ್ತ ತಮ್ಮಿಂದಾಗುವ ಕೆಲಸಗಳನ್ನು ಮಾಡಿಕೊಂಡ್ಡಿದ್ದರು. ಅವಿನಾಶ ಹಸಿವೆಯಾದಾಗ ಮನೆಗೆ ಬಂದು ಊಟ ಮಾಡಿ ಹೋದರೆ ಮತ್ತೇ ಬೆಳ್ಳಿಗೆ ಸ್ನಾನಕ್ಕೆಂದೇ ಬರುತ್ತಿದ್ದನು. ವಯಸ್ಸಾದ ಅತ್ತಿಗೆ ದೂರದ ನಲ್ಲಿಯಿಂದ ಕೊಡ ಹೊತ್ತುಕೊಂಡು ಬರುತ್ತಿದ್ದರೆ ತನಗೇನು ಸಂಬಂಧವಿಲ್ಲವೆಂಬಂತೆ ಕಾಯಿಸಲಿಟ್ಟ ನೀರು ಬಕೀಟಿನಲ್ಲಿ ಸುರುವಿಕೊಂಡು ಜಳಕ ಮಾಡಿ ಮುಂಜಾನೆ ಊಟ ಮುಗಿಸಿ ಊರಿನಲ್ಲಿ ಹೋಗಿ ಬಿಟ್ಟರೆ ತಡರಾತ್ರಿ ಮನೆಗೆ ಬರುತ್ತಿದ್ದನು. ಪಾಪ ಕಸ್ತೂರಿ ಚಂದನದಂತೆ ಈ ಮನೆಗಾಗಿ ಕರಗುತ್ತಿದ್ದಳು. ದುಡಿದದೇಹ ಮುಪ್ಪಿನತ್ತ ಸಾಗುತ್ತಿತ್ತ್ತು. ಮಕ್ಕಳು ತಮ್ಮ ತಮ್ಮ ಹೆಂಡತಿಯರಿಗೆ ಕಟ್ಟಿಕೊಂಡು ದೂರ ಹೋಗಿದ್ದರು. ಇಬ್ಬರೂ ಮೈದುನರ ಮದುವೆಗಳನ್ನೂ ತನ್ನ ಕೈಯಾರೆ ಮಾಡಿದ್ದಳು. ಅವರ ಪತ್ನಿಯರೂ ಆತ್ಮಿಯವಾಗಿ ಎಂದೂ ಹಚ್ಚಿಕೊಂಡಿರಲಿಲ್ಲ. ಮೈದುನರೂ ಸಹ ಮಡದಿರನ್ನು ಕಟ್ಟಿಕೊಂಡು ಬೇರೆಯಾಗಿದ್ದರು. ಪಾಲಿಗೆ ಬಂದ ಹೊಲವನ್ನೆಲ್ಲ ಮಾರ್ಗೆಜ್ ಮಾಡಿ ಸಾಲ ಮಾಡಿಕೊಂಡು ಮುಂಬಯಿಯಲ್ಲಿ ಮೋಟಾರುಗಳನ್ನು ಕೊಂಡು ಶೇಟ ಎನಿಸಿಕೊಂಡಿದ್ದರು. ಮೋಟಾರು ವ್ಯವಸಾಯದಲ್ಲಿ ಕೈ ಸುಟ್ಟುಕೊಂಡು ಮತ್ತೇ ಡ್ರಾಯವರ ನೌಕರಿ ಮಾಡುತ್ತಿರಲು ಆಗಾಗ ಬರುವ ಚುನಾವಣೆಗೊಸ್ಕರ ನಾಯಕರು ಬಾ ಎಂದಾಗ ಊರಿಗೆ ಬಂದು ನಾಲ್ಕು ದಿನಗಳ ಲೀಡರ್ ಆಗಿ ಮೆರೆಯುತ್ತಿದ್ದರು. ಬೀದಿ ನಾಯಿ ಅತ್ತ ಬೀದಿಗೂ ಇಲ್ಲ, ಇತ್ತ ಮನೆಗೂ ಇಲ್ಲ ಎಂಬಂತೆ ಈ ಕಾರ್ಯಕರ್ತರ ಬದುಕಾಗಿತ್ತು.

                ಒಂದು ದಿನ ವಿರಪ್ಪ ಅವಿನಾಶನನ್ನು ಕರೆದು, “ನಿನ್ನ ಹೆಂಡತಿಯನ್ನು ಕರೆದುಕೊ, ಅವಿನಾಶ. ಈ ಸಲ ಮಹಿಳೆ ಆರಕ್ಷಣೆಯಲ್ಲಿ ಅಧ್ಯಕ್ಷ ಸ್ಥಾನವಿದೆ. ನಮಗೆ ಜನಬೆಂಬಲವೂ ಚೆನ್ನಾಗಿದೆ. ಇಂಥ ಸುವರ್ಣ ಅವಕಾಶ ಕಳೆದುಕೊಳ್ಳಬಾರದು.ಎಂದು ಹೇಳಲು ನಾನು ಅವಳನ್ನು ತಾನಾಗಿ ಕರೆಯುವುದಿಲ್ಲ. ಬೇಕಾದರೆ ತಾನೇ ಬರಲಿ. ನಾನು ಅವಳೊಡನೆ ಸಂಸಾರ ಮಾಡಬಲ್ಲೆ. ಆದರೆ ನಾನು ಮಾತ್ರ ಮುಂದಾಗಿ ಕರೆಯುವುದಿಲ್ಲ,’ ಎಂದು ಹೇಳಿದನು. ವಿರಪ್ಪ ಊರಿನ ಮುಖಂಡರಿಂದ ಹೇಳಿ ನೋಡಿದನು. ಆದರೆ ಅವನು ಮಾತ್ರ ಕರೆಯಲು ಸಿದ್ಧನಿರಲಿಲ್ಲ. ತನಗೆ ಸಂಸಾರ ಮಾಡಬೇಕಾಗಿದ್ದರೆ ತಾನು ಹೆಂಡತಿಗಾಗಲಿ, ಅವಳ ತಂದೆ-ತಾಯಿಗಾಗಲಿ ಹೇಳಿ ವಿನಂತಿ ಮಾಡಿ ಹೆಂಡತಿಯನ್ನು ಕರೆದುಕೊಂಡು ಬರಬೇಕಾಗಿರುವುದು ಅವನ ಧರ್ಮವಾಗಿತ್ತು. ಆದರೆ ಅವನು ಮಾತ್ರ ಬೇರೆಯವರು ತನ್ನ ಹೆಂಡತಿಯನ್ನು ಕರೆಯಬೇಕೆಂದೂ ಆಗ ತಾನು ಚೆನ್ನಾಗಿ ನಡೆಸಿಕೊಳ್ಳುವೆ ಎಂದೂ ಹೇಳುತ್ತ ಹೊರಟನು. ಇನ್ನೊಬ್ಬರಿಗೆ ಬೇರೆಯವರ ಸಂಸಾರದ ಅಗತ್ಯವೇನು ಬಂದಿತ್ತು? ನಾನಾದರೂ ಈ ಚುಣಾವಣೆಯ ನೇಪದಿಂದಾದರೂ ಅವನ ಸಂಸಾರ ಸರಿದಾರಿಗೆ ಬಂದರೆ ಒಳ್ಳಯದೆಂದು ಯೋಚಿಸುತ್ತಿದ್ದೇನೆ. ಅದರೆ ಅವನಿಗೆ ಅದರ ಗೊಡವೆ ಇಲ್ಲ. ಅವಿನಾಶನ ಮಾವನಿಗೂ ಫೊನ ಮಾಡಿ ಮಗಳಿಗೆ ಕಳಿಸಿ ಕೊಡು, ತಾನೆ ತಿಳಿದು ಮಾಡಿಕೊಂಡು ಉಣ್ತಾನೆ ಎಂದು ಕೇಳಿಕೊಂಡರು ವಿರಪ್ಪ. ಆಗ ಅವರು ನಾಯಕರೆ ನೀವು ಅವನ ಬೆಂಗಾವಲಿರುವುದು ಬಿಟ್ಟು ಬಿಡಿ, ಅವನಿಗೆ ಬೇಕಾದರೆ ತಾನೆ ಬಂದು ಕರೆದುಕೊಂಡು ಹೋಗಲಿ. ಇನ್ನೊಬ್ಬರ ಹೆಗಲಿನ ಮೇಲೆ ಬಂದೂಕು ಇಟ್ಟು ಹೊಡೆಯುವುದನ್ನು ಬಿಡೋಕೆ ಹೇಳಿ. ನಾಳೆ ನಿಮಗೂ ಪಶ್ಚಾತ್ತಾಪ ಪಡುವಂತಾಗಬಾರದು. ಜೋಕೆ ಎಂದು ಬೆದರಿಸಿದರು. ನಿಜವಾಗಿಯೂ ಅವಿನಾಶ ಇನ್ನೊಬ್ಬರ ಹೆಗಲಿನ ಮೇಲೆ ಬಂದೂಕಿಟ್ಟು ಹೊಡೆಯಲು ಬಯಸುತ್ತಿದ್ದ. ಅವನಿಗೆ ತನ್ನ ಪತ್ನಿ, ಮಕ್ಕಳ ಮೇಲೆ ಪ್ರೀತಿ, ಮಮತೆ, ಮೋಹ ಇರುತ್ತಿದ್ದರೆ ತಾನೇ ಹೋಗಿ ಕರೆದುಕೊಂಡು ಬರುತ್ತಿರಲಿಲ್ಲವೇ? ನಾನೇಕೆ ಮಧ್ಯಸ್ತಿಕೆ ವಹಿಸಬೇಕು? ನಾಳೆ ಏನಾದರೂ ಅನಾಹುತವಾದರೆ ಜನ ನನ್ನನ್ನೇ ಅಲ್ಲವೇ ಕೇಳುವುದು? ಇವನ ಸಹವಾಸವೇ ಬೇಡ ಎಂದು ವಿರಪ್ಪ ನಾಯಕ ಅವಿನಾಶನ ಬೆನ್ನು ಬಿಟ್ಟು ಬಿಟ್ಟರು. ಚುನಾವಣೆಯಲ್ಲಿ ಏನಾದರೂ ಆಗಲಿ ಗೋವಿಂದನ ದಯ ಒಂದಿರಲಿ ಎನ್ನುತ್ತಾ ವೀರಪ್ಪ ಚುನಾವಣೆಯ ದಿನಕ್ಕಾಗಿ ಕಾಯತೊಡಗಿದ್ದರು.                        

-ಶ್ರೀ. ದಿನೇಶ ಠಾಕೂರದಾಸ ಚವ್ಹಾಣ ,                  ಅಕ್ಕಲಕೋಟ

               

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು